ಜೋಧ್‌ಪುರ್ : ರಾಜಸ್ಥಾನದ ಜೋಧ್‌ಪುರ್‌ನ ಗ್ರಾಮೀಣ ಪ್ರದೇಶವೊಂದರಲ್ಲಿ ಮಾನವೀಯತೆಯೇ ನಾಚಿಕೆಯಿಂದ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಕಾಮುಕರ ದೌರ್ಜನ್ಯ ಹಾಗೂ ಪೊಲೀಸರ ನಿರ್ಲಕ್ಷ್ಯಕ್ಕೆ ಇಬ್ಬರು ಸಹೋದರಿಯರು ಬಲಿಯಾಗಿದ್ದಾರೆ. ವರ್ಷಗಳ ಕಾಲ ನಡೆದ ಸಾಮೂಹಿಕ ಅತ್ಯಾಚಾರ, ಹಣ ವಸೂಲಿ ಹಾಗೂ ಬ್ಲ್ಯಾಕ್‌ಮೇಲ್ ಕಿರುಕುಳ ತಾಳಲಾರದೆ ಮೊದಲು ಅಕ್ಕ ಆತ್ಮಹತ್ಯೆ ಮಾಡಿಕೊಂಡರೆ, ಆಕೆಗೆ ನ್ಯಾಯ ಕೊಡಿಸಲು ಹೋರಾಡಿದ ತಂಗಿಯೂ ಇದೀಗ ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾಳೆ. ಈ ಘಟನೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬ್ಲ್ಯಾಕ್‌ಮೇಲ್ ಜಾಲಕ್ಕೆ ಸಿಲುಕಿದ್ದ ಅಕ್ಕ
ಗ್ರಾಮೀಣ ಜೋಧಪುರದ ಇ-ಮಿತ್ರ ಸೇವಾ ಕೇಂದ್ರದ ಆಪರೇಟರ್ ಆಗಿದ್ದ ಮಹಿಪಾಲ್ ಎಂಬಾತ, ಯುವತಿಯೊಬ್ಬಳ ಅಶ್ಲೀಲ ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ. ಆ ವಿಡಿಯೋಗಳನ್ನು ಇಟ್ಟುಕೊಂಡು ಮಹಿಪಾಲ್ ಮತ್ತು ಆತನ ಸಹಚರರಾದ ಶಿವರಾಜ್, ಗೋಪಾಲ್, ವಿಜಾರಾಮ್, ದಿನೇಶ್, ಮನೋಜ್ ಮತ್ತು ಪುಖ್‌ರಾಜ್ ಸೇರಿದಂತೆ ಒಟ್ಟು 8 ಮಂದಿ ಕಳೆದ ನಾಲ್ಕು ವರ್ಷಗಳಿಂದ ಆಕೆಯ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದರು. ಅಷ್ಟೇ ಅಲ್ಲದೆ ಹಣಕ್ಕಾಗಿ ನಿರಂತರವಾಗಿ ಪೀಡಿಸುತ್ತಿದ್ದರು. ಈ ಸುದೀರ್ಘ ನರಕಯಾತನೆಯನ್ನು ತಡೆಯಲಾಗದ ಯುವತಿ, ಕಳೆದ ಮಾರ್ಚ್ 20 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮುಂದುವರಿದ ಕಾಮುಕರ ದೌರ್ಜನ್ಯ
ಅಕ್ಕನ ಸಾವಿನ ನಂತರವೂ ಈ ಕಾಮುಕರ ಅಟ್ಟಹಾಸ ನಿಲ್ಲಲಿಲ್ಲ. ತಂಗಿಯು ಏಪ್ರಿಲ್ 11 ರಂದು ಪೊಲೀಸರಿಗೆ ದೂರು ನೀಡಿ, ಆರೋಪಿಗಳು ತನ್ನ ಅಕ್ಕನ ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಾಗಿ ಬೆದರಿಸಿ ಈಗ ತನ್ನ ಮೇಲೂ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಪೊಲೀಸರಿಗೆ ದೂರು ನೀಡಿದರೂ ಆರೋಪಿಗಳು ಬಹಿರಂಗವಾಗಿಯೇ ಅಡ್ಡಾಡುತ್ತಾ, ‘ಪೊಲೀಸರು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಯುವತಿಗೆ ಸವಾಲು ಹಾಕುತ್ತಾ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ತನಗೆ ನ್ಯಾಯ ಸಿಗದಿದ್ದರೆ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿ ಪೊಲೀಸರಿಗೆ ಮೊದಲೇ ಎಚ್ಚರಿಕೆ ನೀಡಿದ್ದರು.
ನೀರಿನ ಟ್ಯಾಂಕ್ ಏರಿ ಪ್ರತಿಭಟನೆ, ತಂಗಿಯ ದುರಂತ ಅಂತ್ಯ
ದೂರು ದಾಖಲಾಗಿ ತಿಂಗಳು ಕಳೆದರೂ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಳ್ಳದಿದ್ದಾಗ, ಹತಾಶಳಾದ ಯುವತಿ ಶುಕ್ರವಾರ ನ್ಯಾಯಕ್ಕಾಗಿ ಆಗ್ರಹಿಸಿ ನೀರಿನ ಟ್ಯಾಂಕ್ ಏರಿ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸುತ್ತಲೇ ಆಕೆ ವಿಷ ಸೇವಿಸಿದ್ದಾರೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯದಲ್ಲೇ ಯುವತಿ ಕೊನೆಯುಸಿರೆಳೆದಿದ್ದಾರೆ.
ಭುಗಿಲೆದ್ದ ಆಕ್ರೋಶ, ತನಿಖೆಯ ಭರವಸೆ
ಇಬ್ಬರು ಹೆಣ್ಣುಮಕ್ಕಳ ಸರಣಿ ಆತ್ಮಹತ್ಯೆಯಿಂದಾಗಿ ರೊಚ್ಚಿಗೆದ್ದ ರಜಪೂತ ಸಮುದಾಯದ ನೂರಾರು ಜನರು ಹಾಗೂ ಮೃತರ ಕುಟುಂಬಸ್ಥರು ಎಂಡಿಎಂ ಆಸ್ಪತ್ರೆಯ ಶವಾಗಾರದ ಮುಂದೆ ಜಮಾಯಿಸಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಉದ್ದೇಶಪೂರ್ವಕವಾಗಿ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಮಾರ್ವಾಡ್ ರಜಪೂತ ಸಮಾಜದ ಅಧ್ಯಕ್ಷ ಹನುಮಾನ್ ಸಿಂಗ್ ಖಾಂಗ್ಟಾ ಆರೋಪಿಸಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದ ನಂತರ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗುವುದು ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ತಂದೆಯ ಆಕ್ರಂದನ ಮುಗಿಲು ಮುಟ್ಟಿದ್ದು, ತನ್ನಿಬ್ಬರು ಹೆಣ್ಣುಮಕ್ಕಳ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಏಕಾಏಕಿ ಕುಸಿದ ಲಿಫ್ಟ್ – ಇನ್‌ಸ್ಟಾ ಮಾರ್ಟ್ ಉದ್ಯೋಗಿ ಸಾವು



















