ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮಾಡಿಕೊಡುವುದಾಗಿ ಆಮಿಷ ಒಡ್ಡಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಲಕ್ನೋ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಿ.ಎಸ್ಸಿ ಪ್ರಾಣಿಶಾಸ್ತ್ರ (Zoology) ವಿಭಾಗದ ಸಹಾಯಕ ಪ್ರಾಧ್ಯಾಪಕ ಪರಮ್‌ಜಿತ್ ಸಿಂಗ್ ಬಂಧಿತ ಆರೋಪಿಯಾಗಿದ್ದು, ಈತನ ಆಡಿಯೋ ರೆಕಾರ್ಡಿಂಗ್ ಬಹಿರಂಗಗೊಂಡ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ದೇಶಾದ್ಯಂತ ನೀಟ್-ಯುಜಿ (NEET UG 2026) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡು ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ, ಲಕ್ನೋ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಈ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಆಡಿಯೋ ಕ್ಲಿಪ್‌ನಲ್ಲಿ ಬಯಲಾದ ಪ್ರೊಫೆಸರ್ ಅಸಲಿಯತ್ತು
ಸಂತ್ರಸ್ತ ವಿದ್ಯಾರ್ಥಿನಿಯು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಸಲ್ಲಿಸಿರುವ ಆಡಿಯೋ ರೆಕಾರ್ಡಿಂಗ್‌ನಲ್ಲಿ ಪ್ರಾಧ್ಯಾಪಕನ ವಿಕೃತ ಆಟಗಳು ಬಹಿರಂಗವಾಗಿದೆ. “ನಿನಗಾಗಿ ಎರಡು ಪ್ರಶ್ನೆ ಪತ್ರಿಕೆಗಳನ್ನು ತಂದಿಟ್ಟಿದ್ದೇನೆ ಡಾರ್ಲಿಂಗ್, ನನ್ನನ್ನು ಭೇಟಿಯಾಗಲು ಯಾವಾಗ ಬರುತ್ತೀಯಾ?” ಎಂದು ಪ್ರೊಫೆಸರ್ ಕೇಳಿರುವುದು ಆ ರೆಕಾರ್ಡಿಂಗ್‌ನಲ್ಲಿ ದಾಖಲಾಗಿದೆ. ಇದಕ್ಕೆ ಉತ್ತರಿಸಿರುವ ವಿದ್ಯಾರ್ಥಿನಿ, “ನಾನು ಈಗಾಗಲೇ ಪಠ್ಯಕ್ರಮವನ್ನು ಓದಿ ಮುಗಿಸಿದ್ದೇನೆ, ನನಗೆ ಪ್ರಶ್ನೆ ಪತ್ರಿಕೆ ಬೇಡ” ಎಂದು ನಿರಾಕರಿಸಿದ್ದಾಳೆ. ಆದರೂ ಬಿಡದ ಪ್ರೊಫೆಸರ್, ಪರೀಕ್ಷೆಗೆ ಏಳು ದಿನ ಬಾಕಿ ಇರುವಾಗ ನನ್ನನ್ನು ಬಂದು ಭೇಟಿಯಾಗು ಎಂದು ಒತ್ತಾಯಿಸಿದ್ದಾನೆ. ಕರೆಯನ್ನು ಕಡಿತಗೊಳಿಸಿದ ನಂತರ, ಪ್ರೊಫೆಸರ್ ಮತ್ತೊಮ್ಮೆ ಲೈಂಗಿಕ ದೌರ್ಜನ್ಯಕ್ಕೊಳಪಡಿಸುವ ಉದ್ದೇಶದಿಂದಲೇ ನನ್ನನ್ನು ಕರೆಯುತ್ತಿದ್ದ ಎಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾಳೆ.
ತನಿಖೆಗೆ ಆಂತರಿಕ ಸಮಿತಿ ರಚನೆ
ವಿದ್ಯಾರ್ಥಿನಿ ನೀಡಿದ ಆಡಿಯೋ ಸಾಕ್ಷ್ಯಗಳನ್ನು ಆಧರಿಸಿ ಲಕ್ನೋ ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕರು ಸ್ಥಳೀಯ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವವಿದ್ಯಾಲಯದ ಉಪಕುಲಪತಿ ಜೆ.ಪಿ. ಸೈನಿ ಅವರು, ಪ್ರಕರಣದ ತನಿಖೆ ನಡೆಸಿ ಕೇವಲ 24 ಗಂಟೆಗಳ ಒಳಗಾಗಿ ವರದಿ ಸಲ್ಲಿಸುವಂತೆ ಆಂತರಿಕ ದೂರುಗಳ ಸಮಿತಿಗೆ (ICC) ಆದೇಶಿಸಿದ್ದಾರೆ. ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ತರುವ ಯಾವುದೇ ಹಿತಾಸಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಶುಕ್ರವಾರವೇ ಪ್ರಾಕ್ಟರ್ ಕಚೇರಿಯಲ್ಲಿ ಆರೋಪಿ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿನಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.
ರಾಜಕೀಯ ಪಿತೂರಿ ಎಂದ ಆರೋಪಿ
ಪ್ರಾಧ್ಯಾಪಕನ ಕೃತ್ಯವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ವಿಶ್ವವಿದ್ಯಾಲಯದ ಆವರಣದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಆರೋಪಿ ಪ್ರಾಧ್ಯಾಪಕನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಪರೀಕ್ಷಾ ಪಾವಿತ್ರ್ಯತೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಎಬಿವಿಪಿ ಘಟಕದ ಅಧ್ಯಕ್ಷ ಜೈ ಶ್ರೀವಾಸ್ತವ ಆಗ್ರಹಿಸಿದ್ದಾರೆ. ಈ ನಡುವೆ, ಪೊಲೀಸರ ವಶದಲ್ಲಿರುವ ಸಹಾಯಕ ಪ್ರಾಧ್ಯಾಪಕ ಪರಮ್‌ಜಿತ್ ಸಿಂಗ್ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾನೆ. ವಿಶ್ವವಿದ್ಯಾಲಯದ ಆಂತರಿಕ ರಾಜಕೀಯದ ಹಿನ್ನೆಲೆಯಲ್ಲಿ ನನ್ನನ್ನು ಈ ಪ್ರಕರಣದಲ್ಲಿ ಸುಳ್ಳು ಆರೋಪ ಹೊರಿಸಿ ಸಿಲುಕಿಸಲಾಗುತ್ತಿದೆ ಎಂದು ಆತ ವಾದಿಸಿದ್ದಾನೆ.



















