ಬೆಂಗಳೂರು: ಅದೊಂದು ಕಾಲವಿತ್ತು. ನಿಮ್ಮ ಖಾತೆಯಲ್ಲಿರುವ ಪಿಎಫ್ ಹಣವನ್ನು ವಿತ್ ಡ್ರಾ ಮಾಡಬೇಕು ಎಂದರೂ ಇಪಿಎಫ್ಒ ಕಚೇರಿಗಳಿಗೆ ಅಲೆಯಬೇಕಿತ್ತು. ಇದಕ್ಕೆ ತಿಂಗಳುಗಟ್ಟಲೆ ಸಮಯ ಬೇಕಾಗುತ್ತಿತ್ತು. ಆದರೀಗ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಪಿಎಫ್ ವಿತ್ ಡ್ರಾ ಮಾಡುವ ಪ್ರಕ್ರಿಯೆಯನ್ನು ಡಿಜಿಟಲೀಕರಣ ಮಾಡಿರುವ ಕಾರಣ ಕೆಲವೇ ದಿನಗಳಲ್ಲಿ ವಿತ್ ಡ್ರಾ ಮಾಡಲು ಸಾಧ್ಯವಾಗಿದೆ. ಇದರ ಮಧ್ಯೆಯೇ ಇಪಿಎಫ್ಒ ಈಗ ಸದಸ್ಯರಿಗೆ ಹೊಸದೊಂದು ಸಿಹಿ ಸುದ್ದಿ ನೀಡಿದೆ.
ಹೌದು, ಯಾವುದಾದರೂ ಒಬ್ಬ ಇಪಿಎಫ್ಒ ಸದಸ್ಯ ನಿವೃತ್ತಿಯಾಗಿ, ಅವರ ಪಿಎಫ್ ಖಾತೆಯ ಎಲ್ಲ ಮೊತ್ತವನ್ನು ಹಿಂಪಡೆಯಲು ಆಟೋ-ಸೆಟಲ್ ಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸಲು ಇಪಿಎಫ್ಒ ಮುಂದಾಗಿದೆ. ಇದರಿಂದಾಗಿ ನಿವೃತ್ತ ಉದ್ಯೋಗಿಗಳು ಇನ್ನುಮುಂದೆ ಎಲ್ಲ ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡಲು ಕಚೇರಿಗಳಿಗೆ ಅಲೆಯಬೇಕಿಲ್ಲ. ಯಾವುದೇ ಅಧಿಕಾರಿಗಳಿಗೆ ಮನವಿ ಮಾಡಬೇಕಿಲ್ಲ. ಕೇವಲ ಫೈನಲ್ ಸೆಟಲ್ ಮೆಂಟ್ ಗೆ ಅರ್ಜಿ ಹಾಕಿದರೂ ಸಾಕು, ಅವರ ಖಾತೆಗೆ ಹಣ ಜಮೆಯಾಗುತ್ತದೆ.
“ಈಗ 5 ಲಕ್ಷ ರೂಪಾಯಿವರೆಗೆ ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡಲು ಆಟೋ-ಸೆಟಲ್ ಮೆಂಟ್ ಪ್ರಕ್ರಿಯೆ ಇದೆ. ಅಂದರೆ, ಇಪಿಎಫ್ಒ ಸದಸ್ಯರು ಅರ್ಜಿ ಸಲ್ಲಿಸಿದ ಬಳಿಕ ಯಾವುದೇ ಅಧಿಕಾರಿಗಳ ಮಧ್ಯಸ್ಥಿಕೆ, ಸಹಿ, ದೃಢೀಕರಣ ಇಲ್ಲದೆ ಅವರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಫೈನಲ್ ಸೆಟಲ್ ಮೆಂಟ್ ಗೂ ಇದೇ ಪ್ರಕ್ರಿಯೆ ಅನುಸರಿಸಲು ಸರ್ಕಾರ ಚಿಂತನೆ ನಡೆಸಿದೆ’’ ಎಂದು ಇಪಿಎಫ್ಒ ಸೆಂಟ್ರಲ್ ಪ್ರಾವಿಡೆಂಟ್ ಫಂಡ್ ಕಮಿಷನರ್ ರಮೇಶ್ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.
ಖಾಸಗಿ ಕಂಪನಿಗಳ ಉದ್ಯೋಗಿಗಳಿಗೂ ನಿವೃತ್ತಿ ನಿಧಿ ರೂಪಿಸಲು, ಪಿಂಚಣಿ ಒದಗಿಸಲು ಇಪಿಎಫ್ಒ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದರಲ್ಲಿ 7 ಕೋಟಿಗೂ ಅಧಿಕ ಸದಸ್ಯರಿದ್ದಾರೆ. ಇವರೆಲ್ಲರೂ ಇನ್ನುಮುಂದೆ ಆಟೋ ಸೆಟಲ್ ಮೆಂಟ್ ಸೌಲಭ್ಯವನ್ನು ಪಡೆಯಲಿದ್ದಾರೆ. ಇದರ ಜತೆಗೆ, ಎಟಿಎಂ ಹಾಗೂ ಯುಪಿಐ ಮೂಲಕವೂ ಪಿಎಫ್ ಹಣವನ್ನು ವಿತ್ ಡ್ರಾ ಮಾಡುವ ಇಪಿಎಫ್ಒ 3.0 ವ್ಯವಸ್ಥೆಯನ್ನು ಜಾರಿಗೊಳಿಸಲು ಇಪಿಎಫ್ಒ ಮುಂದಾಗಿದೆ. ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.



















