ಚಿಕ್ಕಮಗಳೂರು : ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಸತೀಶ್ (53) ಅಕಾಲಿಕ ನಿಧನ ಹೊಂದಿದವರು.
ಮಂಗಳವಾರ ತಡರಾತ್ರಿ ರಾತ್ರಿ 112 ತುರ್ತು ಸೇವಾ ವಾಹನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಸತೀಶ್ ಅವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿದೆ. ಇತರ ಸಿಬ್ಬಂದಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೂಲತಃ ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದವರಾದ ಇವರು, ಈ ಹಿಂದೆ ಭಾರತೀಯ ಸೇನೆಯಲ್ಲಿಯೂ 17 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದ್ದರು. ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ನಲ್ಲಿ (MEG) ನಾಯಿಬ್ ಸುಬೇದಾರ್ ಆಗಿದ್ದರು.
ಸೇನೆಯಿಂದ ನಿವೃತ್ತರಾದ ಬಳಿಕ ಕಳೆದ 10 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸದ್ಯ ಹರಿಹರಪುರದಲ್ಲಿ ವಾಸವಿದ್ದ ಇವರ ಅಕಾಲಿಕ ನಿಧನಕ್ಕೆ ಪೊಲೀಸ್ ಇಲಾಖೆಯವರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಮಂತ್ರಾಲಯ ಆವರಣದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ಗಳು ಸ್ಫೋಟ – ತಪ್ಪಿದ ಭಾರಿ ಅನಾಹುತ!


















