ಮಹಾರಾಷ್ಟ್ರ\ ವಿಜಯನಗರ : ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಭೀಕರ ದುರಂತ ಸಂಭವಿಸಿದ್ದು, ದೇವಸ್ಥಾನದ ಗೋಡೆ ಕುಸಿದು ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರ-ವಿಜಯನಗರ ಗಡಿಭಾಗದದಲ್ಲಿ ನಡೆದಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೋಟೆವಾಡಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ದುರ್ಘಟನೆ ನಡೆದ ಮೋಟೆವಾಡಿ ಗ್ರಾಮ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಪ್ರದೇಶವಾಗಿದೆ. ಗ್ರಾಮದಲ್ಲಿ ನಿನ್ನೆ ಮರಗುಬಾಯಿ ದೇವಸ್ಥಾನದ ಜಾತ್ರೆ ನಡೆಯುತ್ತಿದ್ದು, ನೂರಾರು ಭಕ್ತರು ಭಾಗವಹಿಸಿದ್ದರು. ಸಂಜೆ ವೇಳೆಗೆ ಹವಾಮಾನ ಏಕಾಏಕಿ ಬದಲಾಗಿದ್ದು, ಭಾರಿ ಗಾಳಿ ಹಾಗೂ ಮಳೆ ಆರಂಭವಾಗಿದೆ.
ಭಾರಿ ಮಳೆ ಮತ್ತು ಗಾಳಿಯಿಂದ ತಪ್ಪಿಸಿಕೊಳ್ಳಲು ದೇವಸ್ಥಾನದ ಗೋಡೆ ಸಮೀಪ ಹಲವರು ಆಶ್ರಯ ಪಡೆದಿದ್ದರು. ಇದೇ ವೇಳೆ ಬಿರುಗಾಳಿಯ ತೀವ್ರತೆಗೆ ದೇವಸ್ಥಾನದ ಗೋಡೆ ಏಕಾಏಕಿ ಕುಸಿದಿದೆ. ಗೋಡೆ ಅಡಿಯಲ್ಲಿ ಸಿಲುಕಿದ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮರಗುಬಾಯಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಜಾತ್ರೆಯ ಸಂಭ್ರಮ ಕ್ಷಣಾರ್ಧದಲ್ಲಿ ಶೋಕಕ್ಕೆ ತಿರುಗಿದೆ. ಗಾಯಾಳುಗಳ ರಕ್ಷಣೆಗೆ ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಗೊಂಡವರನ್ನು ಸಂಖ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಪ್ಲೇ-ಆಫ್ಸ್ ಸನಿಹದಲ್ಲಿರುವ RCBಗೆ ಮರುಜೀವ ಪಡೆದ KKR ಸವಾಲು ; ಕೊಹ್ಲಿ ಫಾರ್ಮ್ ಮೇಲೆ ಕಣ್ಣು!


















