ನವದೆಹಲಿ : ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಇಂದು ಬೆಳಗ್ಗೆ ಗುರುಗ್ರಾಮದ ‘ಮೇದಾಂತ-ದಿ ಮೆಡಿಸಿಟಿ’ ಆಸ್ಪತ್ರೆಗೆ ದಾಖಲಾಗಿದ್ದಾರೆ. 79 ವರ್ಷದ ಸೋನಿಯಾ ಗಾಂಧಿ ಅವರು ಕೆಲವು ವೈದ್ಯಕೀಯ ಪರೀಕ್ಷೆಗಳು ಮತ್ತು ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋನಿಯಾ ಗಾಂಧಿ ಅವರು ಕಳೆದೆರಡು ವರ್ಷದಿಂದ ಸತತವಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ದೆಹಲಿ ಸೇರಿದಂತೆ ಕೆಲ ಭಾಗದಲ್ಲಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಮಾರ್ಚ್ 2026ರಲ್ಲಿ ಸೋನಿಯಾ ಗಾಂಧಿ ಉಸಿರಾಟದ ಸಮಸ್ಯೆಯಿಂದ ದೆಹಲಿಯ ಗಂಗಾ ರಾಮ್ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಇಬ್ಬರು ಆಸ್ಪತ್ರೆಯಲ್ಲಿ ತಾಯಿ ಆರೈಕೆ ಮಾಡಿದ್ದರು.
ಜನವರಿ ತಿಂಗಳಲ್ಲಿ ಸಣ್ಣ ಪ್ರಮಾಣದ ಬ್ರೊಂಕೈಲ್ ಅಸ್ತಮಾ ಸಮಸ್ಯೆಯಿಂದ ಬಳಲಿದ್ದರು. ದೆಹಲಿಯ ವಿಪರೀತ ವಾಯುಲಮಾಲಿನ್ಯ ಸಮಸ್ಯೆಯಿಂದ ಸೋನಿಯಾ ಗಾಂಧಿ ಆರೋಗ್ಯ ಸಮಸ್ಯೆ ಎದುರಿಸಿದ್ದರು. ಈ ವೇಳೆ ದೆಹಲಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
2025ರಲ್ಲಿ ಮೂರು ಬಾರಿ ಆಸ್ಪತ್ರೆ ದಾಖಲು
2025ರಲ್ಲಿ ಸೋನಿಯಾ ಗಾಂಧಿ ಹಲವು ಬಾರಿ ಆರೋಗ್ಯ ಸಮಸ್ಯೆ ಎದುರಿಸಿದ್ದಾರೆ. ಈ ಪೈಕಿ ಮೂರು ಬಾರಿ ಆಸ್ಪತ್ರೆ ದಾಖಲಾಗಿದ್ದರು. ಒಂದು ಬಾರಿ ಹೊಟ್ಟೆ ನೋವಿನ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ದರು. ದೆಹಲಿ ಹಾಗೂ ಶಿಮ್ಲಾದಲ್ಲಿ ಸೋನಿಯಾ ಗಾಂಧಿ ಚಿಕಿತ್ಸೆ ಪಡೆದಿದ್ದರು. ಐದೂ ಬಾರಿ ಲೋಕಸಭಾ ಸಂಸದೆಯಾಗಿ ಆಯ್ಕೆಯಾಗಿರುವ ಸೋನಿಯಾ ಗಾಂಧಿ ಕಳೆದ ಚುನಾವಣೆಯಲ್ಲಿ ಆರೋಗ್ಯ ಹಾಗೂ ವಯಸ್ಸಿನ ಕಾರಣದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಬಳಿಕ ರಾಜ್ಯಸಭೆ ಮೂಲಕ ಸಂಸದರಾಗಿದ್ದರು.
ಇದನ್ನೂ ಓದಿ : ತಮಿಳುನಾಡು ವಿಶ್ವಾಸಮತ ಗೆದ್ದ ‘ದಳಪತಿ’ ವಿಜಯ್ : ಟಿವಿಕೆ ಪರ 144 ಮತ ಒಗ್ಗೂಡಿದ್ದು ಹೇಗೆ?



















