ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮತ್ತೆ ಅಧಿಕಾರ ಹಂಚಿಕೆ ಮತ್ತು ಸಂಪುಟ ಪುನಾರಚನೆ ಚರ್ಚೆ ಜೋರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಭೇಟಿ ಕುರಿತ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ. ಹೈಕಮಾಂಡ್ ನಾಯಕರ ಭೇಟಿಗೆ ಸಿಎಂ ಸಮಯ ಕೇಳಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿವೆ.
ಸದ್ಯ ಕೇರಳ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ರಾಜಕೀಯ ಬೆಳವಣಿಗೆಗಳತ್ತ ಗಮನ ಹರಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಒಂದು ತಿಂಗಳಿನಿಂದ ವಿವಿಧ ಚುನಾವಣೆಗಳಲ್ಲಿ ಬ್ಯುಸಿಯಾಗಿದ್ದ ದೆಹಲಿ ನಾಯಕರು ಇದೀಗ ರಾಜ್ಯ ಕಾಂಗ್ರೆಸ್ ಒಳಜಗಳ ಮತ್ತು ಅಧಿಕಾರ ಹಂಚಿಕೆ ವಿಚಾರಗಳತ್ತ ಕಣ್ಣಿಟ್ಟಿದ್ದಾರೆ ಎಂಬ ಚರ್ಚೆ ಜೋರಾಗಿದೆ.
ರಾಜ್ಯ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಪರಿಪಾಲನೆ ಮಾಡಬೇಕೆಂಬ ಒತ್ತಾಯ ದಿನೇದಿನೇ ಹೆಚ್ಚುತ್ತಿದೆ. ಅದರ ಜೊತೆಗೆ ಸಂಪುಟ ಪುನಾರಚನೆ ಮಾಡುವಂತೆ ಕೆಲ ಶಾಸಕರು ಮತ್ತು ಸಚಿವ ಸ್ಥಾನದ ಆಕಾಂಕ್ಷಿಗಳಿಂದಲೂ ಒತ್ತಡ ಹೆಚ್ಚಾಗಿದೆ. ಸರ್ಕಾರದ ಒಳಗಡೆಯೇ ಹಲವು ನಾಯಕರು ತಮ್ಮದೇ ಲೆಕ್ಕಾಚಾರದಲ್ಲಿ ರಾಜಕೀಯ ಚಟುವಟಿಕೆ ಆರಂಭಿಸಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳ ಸೈಲೆಂಟ್ ಗೇಮ್
ಸೂಕ್ತ ಸಮಯ ಮತ್ತು ಸಂದರ್ಭಕ್ಕಾಗಿ ಸಚಿವ ಸ್ಥಾನ ಆಕಾಂಕ್ಷಿಗಳು ಕಾಯುತ್ತಿದ್ದಾರೆ ಎನ್ನಲಾಗಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಬಂಡೆ ಆಪ್ತರು ಸಹ ಸೈಲೆಂಟ್ ಗೇಮ್ ಆಡುತ್ತಿದ್ದು, ದೆಹಲಿ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳತ್ತ ಕಣ್ಣಿಟ್ಟಿದ್ದಾರೆ. ಬಹಿರಂಗವಾಗಿ ಹೇಳದಿದ್ದರೂ ಒಳಗಡೆಯ ರಾಜಕೀಯ ಚಟುವಟಿಕೆ ಮಾತ್ರ ತೀವ್ರವಾಗಿದೆ ಎಂದು ತಿಳಿದುಬಂದಿದೆ.
ಸಂಪುಟ ಪುನಾರಚನೆ ಆದ್ರೆ ಸಿಎಂ ಕುರ್ಚಿ ಸೇಫ್?
ಸಂಪುಟ ಪುನಾರಚನೆ ನಡೆದರೆ ಮುಖ್ಯಮಂತ್ರಿ ಕುರ್ಚಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎನ್ನುವ ಮಾತುಗಳು ಕೂಡ ಕಾಂಗ್ರೆಸ್ ಮೂಲಗಳಿಂದ ಕೇಳಿಬರುತ್ತಿವೆ. ಸರ್ಕಾರದೊಳಗಿನ ಅಸಮಾಧಾನ ತಣಿಸಲು ಮತ್ತು ಅಧಿಕಾರ ಸಮತೋಲನ ಸಾಧಿಸಲು ಪುನಾರಚನೆ ಮಾರ್ಗವಾಗಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ.
ಮೇ 15 ಅಥವಾ ಸರ್ಕಾರದ ಸಾಧನಾ ಸಮಾವೇಶದ ಬಳಿಕ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೈಕಮಾಂಡ್ ನಾಯಕರ ಜೊತೆ ಸಭೆ ನಡೆಸಿ ರಾಜ್ಯ ರಾಜಕೀಯದ ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚಿಸುವ ಸಾಧ್ಯತೆಗಳೂ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.
ಇದನ್ನೂ ಓದಿ ; ಸ್ಯಾಂಡಲ್‌ವುಡ್‌ಗೆ ದೊಡ್ಡ ಆಘಾತ ; ‘ಹಿಟ್ಲರ್ ಕಲ್ಯಾಣ’ ಖ್ಯಾತಿಯ ದಿಲೀಪ್ ರಾಜ್ ನಿಧನ


















