ಬೆಂಗಳೂರು : ಕನ್ನಡ ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತವಾಗಿದ್ದು, ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ ದಿಲೀಪ್ ರಾಜ್ ಅವರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಿಸದೇ ದಿಲೀಪ್ ರಾಜ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಕುಮಾರಸ್ವಾಮಿ ಲೇಔಟ್ನ ಅಪೋಲೊ ಆಸ್ಪತ್ರೆಯಲ್ಲಿ ನಟ, ನಿರ್ಮಾಪಕ ದಿಲೀಪ್ ರಾಜ್ ಅವರು ಕೊನೆಯುಸಿರೆಳೆದಿದ್ದಾಳೆ. ದಿಲೀಪ್ ರಾಜ್ ಸಾವಿನ ಸುದ್ದಿ, ಕಿರುತೆರೆ ಹಾಗೂ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿದೆ. ದಿಲೀಪ್ ರಾಜ್ ನಿಧನದ ಸುದ್ದಿ ಕೇಳಿ ಕಲಾವಿದರು ಹಾಗೂ ಸ್ನೇಹಿತರು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ.
ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದಿಲೀಪ್ ರಾಜ್ ಮೊದಲು ‘ಕಂಬದ ಮನೆ’ ಧಾರಾವಾಹಿ ನಟಿಸಿದ್ರು, ನಂತರ ಜನನಿ, ಅರ್ಧ ಸತ್ಯ, ರಂಗೋಲಿ, ಕುಂಕುಮ ಭಾಗ್ಯ, ಮಾಂಗಲ್ಯ, ಪ್ರೀತಿಗಾಗಿ, ಹಿಟ್ಲರ್ ಕಲ್ಯಾಣ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದಾರೆ.
ಹಲವು ಸಿನಿಮಾಗಳಲ್ಲಿಯೂ ಮಿಂಚಿದ ದಿಲೀಪ್ ರಾಜ್, 2005ರಲ್ಲಿ ತೆರೆಕಂಡ ‘ಭಾಯ್ ಫ್ರೆಂಡ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ 2007ರಲ್ಲಿ ‘ಮಿಲನ’ ಚಿತ್ರದ ಖಳನಾಯಕನ ಪಾತ್ರದಲ್ಲಿ ಮಿಂಚಿದ್ರು. ನಂತರ 7 ಓ ಕ್ಲಾಕ್, ಕ್ಷಣ ಕ್ಷಣ ಚಿತ್ರ ಹಾಗೂ ಇತ್ತೀಚಿಗೆ ಲವ್ ಮಾಕ್ಟೇಲ್ 3 ಸಿನಿಮಾದಲ್ಲಿ ನಟಿಸಿ ಕನ್ನಡ ಚಿತ್ರರಂಗ ಪ್ರತಿಭಾನ್ವಿತ ನಟನಾಗಿ ಜನಪ್ರಿಯರಾಗಿದ್ರು.
ಸದ್ಯ ದಿಲೀಪ್ ರಾಜ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ “ಕೃಷ್ಣ ರುಕ್ಕು” ನಿರ್ಮಾಪಕರು ಕೂಡ ಆಗಿದ್ರು. ಇದೀಗ ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ಗುರುತಿಸಿಕೊಂಡಿದ್ದ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ನಿಧನ ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದ್ದು, ಚಿತ್ರರಂಗದ ಅನೇಕರು ಹಾಗೂ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.
ಇದನ್ನೂ ಓದಿ : ಅಂಡರ್ ಕನ್‌ಸ್ಟ್ರಕ್ಷನ್ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು!


















