ಬೆಂಗಳೂರು : ರಾಜಧಾನಿ ಬೆಂಗಳೂರಿನ ಜೆಜೆ ನಗರ ಪ್ರದೇಶದಲ್ಲಿ ಪಡ್ಡೆ ಹುಡುಗರ ಅಟ್ಟಹಾಸ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಗಾಂಜಾ ಮತ್ತಿನಲ್ಲಿ ತಿರುಗಾಡುತ್ತಿದ್ದ ಯುವಕರ ಗ್ಯಾಂಗ್ ಏರಿಯಾದಲ್ಲಿ ಮಚ್ಚು ಹಿಡಿದು ಕಂಡ ಕಂಡವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಭಯಾನಕ ಘಟನೆ ಇದೇ ತಿಂಗಳ 5ರಂದು ನಡೆದಿದ್ದು, ಇದೀಗ ಅದರ ದೃಶ್ಯಗಳು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸುತ್ತಿವೆ.
ಗಾಂಜಾ ಸೇವಿಸಿ ಬಂದಿದ್ದ ಯುವಕರ ಗುಂಪು ಜೆಜೆ ನಗರದಲ್ಲಿ ಮಚ್ಚು ಹಿಡಿದು ಸಂಚರಿಸುತ್ತಿದ್ದರೆಂದು ಆರೋಪಿಸಲಾಗಿದೆ. ರಸ್ತೆಯಲ್ಲಿ ಸಿಕ್ಕ ಸಿಕ್ಕವರನ್ನು ಬೆದರಿಸಿ ಹಲ್ಲೆ ನಡೆಸಿರುವುದಲ್ಲದೆ, ಕೆಲವರಿಂದ ಹಣ ಮತ್ತು ಮೊಬೈಲ್ ಕಸಿದುಕೊಂಡಿದ್ದಾರೆ ಎನ್ನಲಾಗಿದೆ.
ಗ್ಯಾಂಗ್‌ನ ವರ್ತನೆ ಪ್ರಶ್ನೆ ಮಾಡಿದವರ ಮೇಲೂ ಮಚ್ಚಿನಿಂದ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಯುವಕರ ಹುಚ್ಚಾಟದಿಂದ ಸಾರ್ವಜನಿಕರು ಭಯಭೀತರಾಗಿದ್ದು, ಸಂಜೆ ಬಳಿಕ ಮನೆಯಿಂದ ಹೊರಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದ ಕೆಲ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಯುವಕರು ನಿರ್ಭಯವಾಗಿ ಮಚ್ಚು ಬೀಸುತ್ತಿರುವ ದೃಶ್ಯಗಳು ಜನರನ್ನು ಬೆಚ್ಚಿಬೀಳಿಸಿವೆ. ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ. ಆದರೆ, ಪ್ರಕರಣ ದಾಖಲಾಗಿದ್ದರೂ ಪೊಲೀಸರು ಕಠಿಣ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ.
ಪೊಲೀಸರು ಕೇವಲ ಒಬ್ಬಿಬ್ಬರನ್ನು ಬಂಧಿಸಿ ಕೈತೊಳೆದುಕೊಂಡಿದ್ದಾರೆ ಎಂಬ ಅಸಮಾಧಾನ ಸ್ಥಳೀಯರಲ್ಲಿ ಹೆಚ್ಚಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ದಾರುಣ ಘಟನೆ.. ಶೆಡ್‌ಗೆ ಬೆಂಕಿ ಬಿದ್ದು ಇಬ್ಬರು ಮಕ್ಕಳು ದುರ್ಮರಣ!



















