ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ, ಜಾಗತಿಕ ತೈಲ ಪೂರೈಕೆಯ ಜೀವನಾಡಿಯಾಗಿರುವ ‘ಹೊರ್ಮುಜ್ ಜಲಸಂಧಿ’ಯ (Strait of Hormuz) ಮೂಲಕ ಸಾಗುವ ಹಡಗುಗಳಿಗೆ ಇರಾನ್ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಜಲಸಂಧಿ ಪ್ರವೇಶಕ್ಕೆ ಅಧಿಕೃತವಾಗಿ ಸುಂಕ (Toll) ವಿಧಿಸಲು ಮುಂದಾಗಿರುವ ಟೆಹ್ರಾನ್, ತನ್ನ ಅನುಮತಿ ಇಲ್ಲದೆ ಯಾವುದೇ ವಿದೇಶಿ ಹಡಗುಗಳು ಈ ಮಾರ್ಗದಲ್ಲಿ ಸಂಚರಿಸುವಂತಿಲ್ಲ ಎಂದು ಖಡಕ್ ಆದೇಶ ಹೊರಡಿಸಿದೆ. ಜಗತ್ತಿನ ಐದನೇ ಒಂದರಷ್ಟು ತೈಲ ಸಾಗಣೆಯಾಗುವ ಈ ಮಾರ್ಗವನ್ನು ಮುಕ್ತಗೊಳಿಸಲು ಅಮೆರಿಕ ಯತ್ನಿಸುತ್ತಿರುವಾಗಲೇ ಇರಾನ್ ಈ ಮಹತ್ವದ ಹೆಜ್ಜೆ ಇಟ್ಟಿದೆ.
40ಕ್ಕೂ ಹೆಚ್ಚು ಪ್ರಶ್ನೆಗಳಿರುವ ಅರ್ಜಿ ಸಲ್ಲಿಕೆ ಕಡ್ಡಾಯ
ಹಡಗುಗಳ ಸಂಚಾರವನ್ನು ನಿಯಂತ್ರಿಸಲು ಇರಾನ್‌ನ ‘ಪರ್ಷಿಯನ್ ಗಲ್ಫ್ ಸ್ಟ್ರೈಟ್ ಅಥಾರಿಟಿ’ (PGSA) ಹೊಸ ಕಾನೂನು ಚೌಕಟ್ಟನ್ನು ಸಿದ್ಧಪಡಿಸಿದೆ. ಹೊರ್ಮುಜ್ ಜಲಸಂಧಿಯನ್ನು ಪ್ರವೇಶಿಸುವ ಮುನ್ನ ಹಡಗುಗಳು ‘ಹಡಗು ಮಾಹಿತಿ ಘೋಷಣೆ’ (Vessel Information Declaration) ಎಂಬ 40ಕ್ಕೂ ಹೆಚ್ಚು ಪ್ರಶ್ನೆಗಳಿರುವ ಪ್ರತ್ಯೇಕ ಅರ್ಜಿಯನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ. ಇದರಲ್ಲಿ ಹಡಗಿನ ಹೆಸರು, ಗುರುತಿನ ಸಂಖ್ಯೆ, ಮಾಲೀಕತ್ವ, ವಿಮೆ, ಸಿಬ್ಬಂದಿಯ ರಾಷ್ಟ್ರೀಯತೆ, ಮೂಲ ದೇಶ, ಗಮ್ಯಸ್ಥಾನ ಮತ್ತು ಸರಕುಗಳ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು. ಮಾಹಿತಿಯನ್ನು ಪ್ರಾಧಿಕಾರದ ಅಧಿಕೃತ ಇಮೇಲ್‌ಗೆ ಕಳುಹಿಸಿದ ಬಳಿಕವಷ್ಟೇ ಮುಂದಿನ ಸೂಚನೆಗಳನ್ನು ನೀಡಲಾಗುತ್ತದೆ. ಒಂದು ವೇಳೆ ತಪ್ಪು ಅಥವಾ ಅಪೂರ್ಣ ಮಾಹಿತಿ ನೀಡಿದರೆ ಅದರಿಂದಾಗುವ ಎಲ್ಲಾ ಅನಾಹುತಗಳಿಗೆ ಹಡಗುಗಳೇ ಹೊಣೆಯಾಗಬೇಕಾಗುತ್ತದೆ ಎಂದು ಇರಾನ್ ಎಚ್ಚರಿಸಿದೆ.
ಅಮೆರಿಕ-ಇಸ್ರೇಲ್ ಹಡಗುಗಳಿಗೆ ನಿರ್ಬಂಧ: ಭಾರತಕ್ಕೆ ಅವಕಾಶ
ಹೊಸ ನಿಯಮಾವಳಿಗಳ ಅನ್ವಯ ಅಮೆರಿಕ ಅಥವಾ ಇಸ್ರೇಲ್ ಜೊತೆ ನಂಟು ಹೊಂದಿರುವ ಯಾವುದೇ ಹಡಗುಗಳಿಗೆ ಈ ಜಲಸಂಧಿಯಲ್ಲಿ ಪ್ರವೇಶವಿಲ್ಲ ಎಂದು ಇರಾನ್ ಕಟ್ಟುನಿಟ್ಟಾಗಿ ತಿಳಿಸಿದೆ. ಅಲ್ಲದೆ, ಇರಾನ್ ಮೇಲೆ ಅಮೆರಿಕ ವಿಧಿಸಿರುವ ಆರ್ಥಿಕ ನಿರ್ಬಂಧಗಳನ್ನು ಬೆಂಬಲಿಸುವ ದೇಶಗಳ ಹಡಗುಗಳಿಗೂ ಈ ಮಾರ್ಗದಲ್ಲಿ ಸಂಚಾರ ಕಷ್ಟವಾಗಲಿದೆ. ಆದರೆ, ಈ ಬಿಕ್ಕಟ್ಟಿನ ನಡುವೆಯೂ ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಕೆಲವೇ ಕೆಲವು ರಾಷ್ಟ್ರಗಳು ಟೆಹ್ರಾನ್ ಜೊತೆ ಯಶಸ್ವಿ ರಾಜತಾಂತ್ರಿಕ ಮಾತುಕತೆ ನಡೆಸಿದ್ದು, ತಮ್ಮ ದೇಶದ ಧ್ವಜವಿರುವ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಅಧಿಕೃತ ಅನುಮತಿ ಪಡೆದುಕೊಂಡಿವೆ ಎಂದು ವರದಿಯಾಗಿದೆ. ಅಮೆರಿಕದ ನಿರ್ಣಯಗಳನ್ನು ಬೆಂಬಲಿಸುವ ಬಹ್ರೇನ್‌ನಂತಹ ದೇಶಗಳು ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಮುಖ್ಯಸ್ಥ ಇಬ್ರಾಹಿಂ ಅಜೀಜಿ ಎಚ್ಚರಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ತೀವ್ರಗೊಂಡ ಚರ್ಚೆ
ಕಳೆದ ಫೆಬ್ರವರಿ 28ರಂದು ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದಾಗಿನಿಂದ ಇರಾನ್ ಈ ಜಲಸಂಧಿಯನ್ನು ನಿರ್ಬಂಧಿಸುತ್ತಾ ಬಂದಿದೆ. ಇದರಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಇತಿಹಾಸದಲ್ಲೇ ಅತಿ ದೊಡ್ಡ ವ್ಯತ್ಯಯ ಉಂಟಾಗಿದ್ದು, ಇಂಧನ ಬೆಲೆಗಳು ಗಗನಕ್ಕೇರಿವೆ. ಸುಂಕದ ಮೂಲಕ ಸಂಗ್ರಹವಾಗುವ ಆದಾಯವನ್ನು ಇರಾನ್, ಒಮಾನ್ ದೇಶದ ಜೊತೆ ಹಂಚಿಕೊಳ್ಳುತ್ತಿದ್ದು, ಈಗಾಗಲೇ ಮೊದಲ ಕಂತಿನ ಸುಂಕದ ಆದಾಯವನ್ನು ಪಡೆದಿರುವುದಾಗಿ ಘೋಷಿಸಿದೆ. ವಿದೇಶಿಯರ ಹಸ್ತಕ್ಷೇಪವಿಲ್ಲದ ಪ್ರಬಲ ಇರಾನ್ ನಿರ್ಮಾಣದತ್ತ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಒಲವು ತೋರಿದ್ದಾರೆ.
ಮತ್ತೊಂದೆಡೆ, ಅಮೆರಿಕವು ಕೊಲ್ಲಿಯಲ್ಲಿರುವ ಇರಾನ್ ಬಂದರುಗಳ ಮೇಲೆ ದಿಗ್ಬಂಧನ ವಿಧಿಸಿದ್ದು, ಟೆಹ್ರಾನ್‌ಗೆ ಸುಂಕ ಪಾವತಿಸದಂತೆ ಹಡಗುಗಳಿಗೆ ಎಚ್ಚರಿಕೆ ನೀಡಿದೆ. ಜಲಸಂಧಿಯಲ್ಲಿ ಇರಾನ್‌ನ ಈ ನಿರ್ಬಂಧಗಳನ್ನು ತೆರವುಗೊಳಿಸಲು ಒತ್ತಾಯಿಸಿ ಅಮೆರಿಕ ಮತ್ತು ಬಹ್ರೇನ್ ವಿಶ್ವಸಂಸ್ಥೆಯಲ್ಲಿ ನಿರ್ಣಯವೊಂದನ್ನು ಮಂಡಿಸಲು ಕರಡು ಸಿದ್ಧಪಡಿಸಿವೆ. ಆದರೆ, ಇರಾನ್ ಬೆನ್ನಿಗೆ ನಿಂತಿರುವ ರಷ್ಯಾ, ತನ್ನ ವೀಟೋ (Veto) ಅಧಿಕಾರ ಬಳಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ನಿರ್ಣಯವನ್ನು ತಡೆಯುವುದಾಗಿ ಎಚ್ಚರಿಸಿದ್ದು, ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಇದನ್ನೂ ಓದಿ : “ಸ್ವೀಕಾರಾರ್ಹ ಅಲ್ಲವೇ ಅಲ್ಲ”: ಇರಾನ್ ಶಾಂತಿ ಪ್ರಸ್ತಾವನೆ ತಿರಸ್ಕರಿಸಿದ ಟ್ರಂಪ್, ಶರಣಾಗುವ ಪ್ರಶ್ನೆಯೇ ಇಲ್ಲ ಎಂದ ಟೆಹ್ರಾನ್



















