ಬೀದರ್ : ಈಜಲು ಹೋಗಿದ್ದ ಯುವಕನೊಬ್ಬ ಮಾಂಜ್ರಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದು, ಮೂರು ದಿನಗಳ ನಿರಂತರ ಶೋಧ ಕಾರ್ಯಾಚರಣೆಯ ಬಳಿಕ ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.
ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಬಳತ(ಬಿ) ಗ್ರಾಮದ ಹೊರವಲಯದಲ್ಲಿರುವ ಮಾಂಜ್ರಾ ನದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಳತ(ಬಿ) ಗ್ರಾಮದ ಯುವರಾಜ ಅನೀಲ ಚಿದ್ರೆ (28) ಮೃತ ಯುವಕ ಎಂದು ಗುರುತಿಸಲಾಗಿದೆ. ಯುವರಾಜ ತನ್ನ ಮೂವರು ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವೇಳೆ, ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಎಂದು ತಿಳಿದುಬಂದಿದೆ.
ಯುವಕನಿಗಾಗಿ ಕಳೆದ ಮೂರು ದಿನಗಳಿಂದ ಎಸ್‌ಡಿಆರ್‌ಎಫ್ ಸಿಬ್ಬಂದಿ, ಅಗ್ನಿಶಾಮಕ ದಳ, ಪೊಲೀಸರು ಹಾಗೂ ಈಜು ತಜ್ಞರು ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ನಿರಂತರ ಕಾರ್ಯಾಚರಣೆಯ ಬಳಿಕ ಇಂದು ಬೆಳಿಗ್ಗೆ ನದಿಯಲ್ಲಿ ಯುವರಾಜನ ಮೃತದೇಹ ಪತ್ತೆಯಾಗಿದೆ. ಮನೆಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ : ಆನೇಕಲ್‌ನಲ್ಲಿ ಮಿತಿಮೀರಿದ ಪುಂಡರ ಹಾವಳಿ.. ನಡುರಸ್ತೆಯಲ್ಲೇ ಯುವಕನ ಮೇಲೆ ಹಲ್ಲೆ


















