ಬೆಂಗಳೂರು : ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2026ರ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ಆಡುತ್ತಿರುವ ಇಂಗ್ಲೆಂಡ್‌ನ ಯುವ ಆಟಗಾರ ಜೇಕಬ್ ಬೆಥೆಲ್, ತಮ್ಮ ಐಪಿಎಲ್ ಪಯಣದ ಬಗ್ಗೆ ಎದ್ದಿದ್ದ ಭಾರೀ ಚರ್ಚೆಗಳಿಗೆ ಇದೀಗ ಮೌನ ಮುರಿದಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ದಿಗ್ಗಜರಾದ ಅಲೆಸ್ಟರ್ ಕುಕ್ ಹಾಗೂ ಕೆವಿನ್ ಪೀಟರ್ಸನ್ ನಡುವಿನ ವಾದ-ವಿವಾದಗಳಿಗೆ ಪ್ರತಿಕ್ರಿಯಿಸಿರುವ ಬೆಥೆಲ್, ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ತಮ್ಮ ವೃತ್ತಿಜೀವನಕ್ಕೆ ಮುಳುವಾಗುವುದಿಲ್ಲ ಬದಲಿಗೆ ಹೆಚ್ಚಿನ ನೆರವು ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂಗ್ಲೆಂಡ್ ದಿಗ್ಗಜರ ವಾದ-ವಿವಾದವೇನು?
ಆರ್‌ಸಿಬಿ ತಂಡದಲ್ಲಿ ಅವಕಾಶ ವಂಚಿತರಾಗಿ ಬಹುಪಾಲು ಪಂದ್ಯಗಳಲ್ಲಿ ಬೆಂಚ್ ಕಾಯುತ್ತಿರುವ ಬೆಥೆಲ್ ನಿರ್ಧಾರವನ್ನು ಮಾಜಿ ನಾಯಕ ಅಲೆಸ್ಟರ್ ಕುಕ್ ಪ್ರಶ್ನಿಸಿದ್ದರು. ಐಪಿಎಲ್‌ನಲ್ಲಿ ಬೆಂಚ್ ಮೇಲೆ ಕೂರುವ ಬದಲು ಇಂಗ್ಲೆಂಡ್‌ಗೆ ಮರಳಿ ಕೌಂಟಿ ಕ್ರಿಕೆಟ್‌ನಲ್ಲಿ ವಾರ್ವಿಕ್‌ಶೈರ್ ತಂಡವನ್ನು ಪ್ರತಿನಿಧಿಸಿದರೆ ಅವರ ಆಟ ಮತ್ತಷ್ಟು ಸುಧಾರಿಸುತ್ತದೆ ಎಂಬುದು ಕುಕ್ ವಾದವಾಗಿತ್ತು.
ಆದರೆ, ಈ ಅಭಿಪ್ರಾಯವನ್ನು ಕಟುವಾಗಿ ವಿರೋಧಿಸಿದ್ದ ಮತ್ತೋರ್ವ ದಿಗ್ಗಜ ಕೆವಿನ್ ಪೀಟರ್ಸನ್, ಬೆಥೆಲ್ ಅವರಂತಹ ಯುವ ಆಟಗಾರನಿಗೆ ಐಪಿಎಲ್‌ನಂತಹ ಬೃಹತ್ ವೇದಿಕೆಯ ವಾತಾವರಣವೇ ಅತ್ಯಮೂಲ್ಯ. ವಿಶ್ವದ ಶ್ರೇಷ್ಠ ಆಟಗಾರರೊಂದಿಗೆ ಅಭ್ಯಾಸ ಮಾಡುವುದು, ಉನ್ನತ ಮಟ್ಟದ ಕೋಚ್‌ಗಳಿಂದ ಕಲಿಯುವುದು ಹಾಗೂ ಫ್ರಾಂಚೈಸಿ ಕ್ರಿಕೆಟ್‌ನ ಒತ್ತಡವನ್ನು ನಿಭಾಯಿಸುವುದರಿಂದ ಅವರ ಬೆಳವಣಿಗೆಯ ವೇಗ ಹೆಚ್ಚಲಿದೆ ಎಂದು ಸಮರ್ಥಿಸಿಕೊಂಡಿದ್ದರು.
ಐಪಿಎಲ್‌ನಿಂದಲೇ ನನ್ನ ಆಟ ಮತ್ತಷ್ಟು ಸುಧಾರಿಸಲಿದೆ
ರಾಯ್‌ಪುರದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೇಕಬ್ ಬೆಥೆಲ್, ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. “ಪ್ರತಿಯೊಬ್ಬರ ಆಲೋಚನಾ ಲಹರಿ ಭಿನ್ನವಾಗಿರುತ್ತದೆ. ಆದರೆ ವೈಯಕ್ತಿಕ ದೃಷ್ಟಿಕೋನದಿಂದ ಹೇಳುವುದಾದರೆ, ನಾನು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದೇನೆ ಎಂದು ಭಾವಿಸುತ್ತೇನೆ.
ಇದು ವರ್ಷದ ಅತ್ಯಂತ ದೊಡ್ಡ ಟೂರ್ನಿಯಾಗಿದ್ದು, ವಿಶ್ವದ ಬಹುಪಾಲು ಶ್ರೇಷ್ಠ ಕ್ರಿಕೆಟಿಗರು ಇದರಲ್ಲಿ ಭಾಗವಹಿಸುತ್ತಾರೆ. ಇಲ್ಲಿನ ಅನುಭವವು ನನ್ನ ವೃತ್ತಿಜೀವನಕ್ಕೆ ಹಾನಿ ಮಾಡುತ್ತದೆ ಅಥವಾ ನನ್ನ ಏಳಿಗೆಯನ್ನು ತಡೆಯುತ್ತದೆ ಎಂದು ನಾನು ಖಂಡಿತ ಅಂದುಕೊಂಡಿಲ್ಲ. ವಾಸ್ತವದಲ್ಲಿ ಇದು ನನ್ನ ಆಟವನ್ನು ಇನ್ನಷ್ಟು ಉತ್ತಮಗೊಳಿಸಲಿದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯ ಹೊಂದಲು ಹಕ್ಕಿದೆ, ಆದರೆ ದಿನದ ಅಂತ್ಯದಲ್ಲಿ ನಾನು ಈಗಿರುವ ಸ್ಥಾನದ ಬಗ್ಗೆ ಅತ್ಯಂತ ಸಂತೋಷವಾಗಿದ್ದೇನೆ” ಎಂದು ಬೆಥೆಲ್ ತಿಳಿಸಿದ್ದಾರೆ.
ಆರ್‌ಸಿಬಿ ತಂಡದಲ್ಲಿ ಬೆಥೆಲ್ ಅವಕಾಶ
ಐಪಿಎಲ್ 2026ರ ಋತುವಿನಲ್ಲಿ ಜೇಕಬ್ ಬೆಥೆಲ್ ಅವರಿಗೆ ನಿರಂತರವಾಗಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಇಂಗ್ಲೆಂಡ್‌ನ ಸ್ಟಾರ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಬೆರಳಿನ ಗಾಯದ ಸಮಸ್ಯೆಯಿಂದ ತವರಿಗೆ ಮರಳಿದ ಬಳಿಕವಷ್ಟೇ ಬೆಥೆಲ್ ಆಡುವ ಬಳಗದಲ್ಲಿ ಕಾಣಿಸಿಕೊಂಡರು. ಸಾಲ್ಟ್ ಅನುಪಸ್ಥಿತಿಯಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿ ಹೊತ್ತಿರುವ ಈ ಯುವ ಆಟಗಾರ, ಇದುವರೆಗೆ ಆಡಿದ 4 ಪಂದ್ಯಗಳಲ್ಲಿ 138.70ರ ಸ್ಟ್ರೈಕ್ ರೇಟ್ ಹಾಗೂ 10.75ರ ಸರಾಸರಿಯಲ್ಲಿ 43 ರನ್ ಕಲೆಹಾಕಿದ್ದಾರೆ.
ಅಗ್ರಸ್ಥಾನದತ್ತ ಆರ್‌ಸಿಬಿ ಚಿತ್ತ
ಸತತ ಗೆಲುವುಗಳೊಂದಿಗೆ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸ್ತುತ ಪ್ಲೇ-ಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ರಾಯ್‌ಪುರದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಜೊತೆಗೆ ಪ್ಲೇ-ಆಫ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿಕೊಳ್ಳುವ ಉತ್ತಮ ಅವಕಾಶ ಆರ್‌ಸಿಬಿ ಮುಂದಿದೆ.
ಇದನ್ನೂ ಓದಿ : ರಾಜ್ಯ CESCOM ಸಂಸ್ಥೆಯಲ್ಲಿ 200 ಹುದ್ದೆಗಳ ನೇಮಕಾತಿ : ಫ್ರೆಶರ್‌ಗಳಿಗೆ ಒಳ್ಳೆಯ ಅವಕಾಶ!



















