ಜೈಪುರ : ಶುಭಮನ್ ಗಿಲ್, ಸಾಯಿ ಸುದರ್ಶನ್ ಸ್ಪೋಟಕ ಬ್ಯಾಟಿಂಗ್, ರಶೀದ್ ಖಾನ್ ಸ್ಪಿನ್ ಜಾದುಗೆ ರಾಜಸ್ಥಾನ್ ರಾಯಲ್ಸ್ ಮಂಕಾಗಿದ್ದು, ತವರಲ್ಲೇ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಗ್ಗುಬಡಿದ ಗುಜರಾತ್ ಟೈಟಾನ್ಸ್ 77 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು.ಈ ಗುರಿ ಬೆನ್ನತ್ತಿದ ರಾಜಸ್ಥಾನ್ ಕೇವಲ 152 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಜೈಪುರ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್‌ನ ಆರಂಭಿಕರಾದ ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ನೀಡಿದರು. ಸುದರ್ಶನ್ 36 ಬಾಲ್‌ಗೆ 55 ರನ್ ಗಳಿಸಿದರು. ಗಿಲ್ 44 ಬಾಲ್‌ಗೆ 3 ಸಿಕ್ಸರ್ ಮತ್ತು 9 ಫೋರ್‌ಗಳ ಅಮೋಘ ಆಟದಿಂದ 84 ರನ್ ಪೇರಿಸಿದರು. ವಾಷಿಂಗ್ಟನ್ ಸುಂದರ್ 37 ರನ್ ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು.
ನಂತರ ಬ್ಯಾಟಿಂಗ್ ಮಾಡಿದ ಸ್ಟ್ಯಾಂಡ್-ಇನ್ ನಾಯಕ ಯಶಸ್ವಿ ಜೈಸ್ವಾಲ್ ನೇತೃತ್ವದ ಆರ್‌ಆರ್ 16.3 ಓವರ್‌ಗಳಲ್ಲಿ ಕೇವಲ 152 ರನ್‌ಗಳಿಗೆ ಆಲೌಟ್ ಆಯಿತು. ರಶೀದ್ ಖಾನ್ ನಾಲ್ಕು ವಿಕೆಟ್‌ಗಳೊಂದಿಗೆ ಗುಜರಾತ್ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು. ಜೇಸನ್ ಹೋಲ್ಡರ್ ಮೂರು ವಿಕೆಟ್ ಹಾಗೂ ಕಗಿಸೊ ರಬಾಡ ಎರಡು ವಿಕೆಟ್, ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದರು.
ಆರ್ಸಿಬಿಗೆ ಆಘಾತ :
ಈ ಗೆಲುವಿನೊಂದಿಗೆ, ಗುಜರಾತ್ 11 ಪಂದ್ಯಗಳಿಂದ ಒಟ್ಟು 14 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿಕೆ ಕಂಡರೇ, 77 ರನ್‌ಗಳ ಭಾರೀ ಸೋಲಿನ ನಂತರ, 11 ಪಂದ್ಯಗಳಿಂದ ಒಟ್ಟು 12 ಅಂಕಗಳೊಂದಿಗೆ ರಾಜಸ್ಥಾನ ನಾಲ್ಕನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದಿದೆ. ಏತನ್ಮಧ್ಯೆ ಮೂರನೇ ಸ್ಥಾನದಲ್ಲಿದ್ದ ಆರ್ಸಿಬಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ಇದನ್ನೂ ಓದಿ : ಬೆಂಗಳೂರಿಗೆ ಇಂದು ಪ್ರಧಾನಿ ಮೋದಿ ಆಗಮನ.. ಈ ರಸ್ತೆಯಲ್ಲಿ ಸಂಚಾರ ಬದಲಾವಣೆ!



















