ಬೆಂಗಳೂರು : ಕಡಿಮೆ ಬಡ್ಡಿ ಮತ್ತು ಹೆಚ್ಚು ಹಣ ಸಿಗುತ್ತದೆ ಎಂಬ ಆಸೆಗೆ ಹೋಗಿ ಇದೀಗ ಹಲವರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ಚಿನ್ನ ಅಡವಿಟ್ಟ ಜನರು ಇದೀಗ ತಮ್ಮ ಒಡವೆಗಳನ್ನು ಮರಳಿ ಪಡೆಯಲಾಗದೆ ಪರದಾಡುತ್ತಿದ್ದು, ಜ್ಯುವೆಲ್ಲರಿ ಶಾಪ್ ಮಾಲೀಕನ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಬೆಂಗಳೂರಿನ ಹೆಸರಘಟ್ಟದಲ್ಲಿರುವ ರಾಘವೇಂದ್ರ ಜ್ಯುವೆಲ್ಲರಿ ಶಾಪ್ ಓನರ್ ತೇಜಸ್ ಗೌಡ ಎಂಬಾತನ ವಿರುದ್ಧ ಹಲವು ಜನರು ದೂರು ನೀಡುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಹಲವರಿಂದ ಚಿನ್ನ ಗಿರವಿ ಇಡಿಸಿಕೊಂಡಿದ್ದ ಈತ, ಇದೀಗ ಅಂಗಡಿ ಮುಚ್ಚಿ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ತೇಜಸ್ ಗೌಡ ತನ್ನದೇ ಒಂದು ಟೀಮ್ ಮಾಡಿಕೊಂಡು ಯಾರು ಯಾವ ಜ್ಯುವೆಲ್ಲರಿ ಶಾಪ್‌ನಲ್ಲಿ ಚಿನ್ನ ಅಡವಿಟ್ಟಿದ್ದಾರೆ ಎಂಬ ಮಾಹಿತಿ ಕಲೆಹಾಕುತ್ತಿದ್ದ. ಬಳಿಕ ಆ ಜನರನ್ನು ಸಂಪರ್ಕಿಸಿ ಕಡಿಮೆ ಬಡ್ಡಿ ಮತ್ತು ಹೆಚ್ಚು ಹಣ ಸಿಗುತ್ತದೆ ಎಂದು ನಂಬಿಸುತ್ತಿದ್ದ ಎನ್ನಲಾಗಿದೆ. ಇನ್ನು, ಜನರು ಬೇರೆ ಅಂಗಡಿಗಳಲ್ಲಿ ಅಡವಿಟ್ಟಿದ್ದ ಚಿನ್ನವನ್ನು ತೇಜಸ್ ಗೌಡ ತಾನೇ ಹೋಗಿ ಬಿಡಿಸಿಕೊಂಡು ಬರುತ್ತಿದ್ದ. ಬಳಿಕ “50 ಪೈಸೆ ಬಡ್ಡಿ ಮಾತ್ರ” ಎಂದು ಹೇಳಿ ತನ್ನದೇ ರಾಘವೇಂದ್ರ ಜ್ಯುವೆಲ್ಲರಿ ಶಾಪ್‌ನಲ್ಲಿ ಮತ್ತೆ ಗಿರವಿ ಇಡಿಸಿಕೊಳ್ಳುತ್ತಿದ್ದ ಎಂದು ಆರೋಪ ಕೇಳಿಬಂದಿದೆ.
ಕಳೆದ ಮೂರು ತಿಂಗಳಿಂದ ರಾಘವೇಂದ್ರ ಜ್ಯುವೆಲ್ಲರಿ ಶಾಪ್ ಬಂದ್ ಆಗಿದ್ದು, ಚಿನ್ನ ಅಡವಿಟ್ಟ ಜನರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಡವೆ ಬಿಡಿಸಲು ಹೋದಾಗ ಅಂಗಡಿ ಬಾಗಿಲು ಮುಚ್ಚಿರುವುದನ್ನು ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ಬಳಿಕ ಚಿನ್ನದ ಬಗ್ಗೆ ಫೋನ್‌ನಲ್ಲಿ ಪ್ರಶ್ನೆ ಮಾಡಿದಾಗ “ಒಡವೆ ಕೊಡ್ತೀನಿ” ಎಂದು ತೇಜಸ್ ಗೌಡ ಭರವಸೆ ನೀಡುತ್ತಿದ್ದ. ಆದರೆ, ಇದೀಗ ಸಂಪರ್ಕಕ್ಕೂ ಸಿಗದೆ ಜನರನ್ನು ಅಲೆದಾಡಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇನ್ನು, ಜ್ಯುವೆಲ್ಲರಿ ಶಾಪ್ ಕ್ಲೋಸ್ ಆದ ಬಳಿಕ ತೇಜಸ್ ಗೌಡ ಫೈನಾನ್ಸ್ ಕಂಪನಿ ಆರಂಭಿಸಿದ್ದ ಎನ್ನಲಾಗಿದೆ. ಆದರೆ ಇದೀಗ ಆ ಕಂಪನಿಯೂ ಕಳೆದ ಒಂದು ವಾರದಿಂದ ಬಂದ್ ಆಗಿದ್ದು, ಇದರಿಂದ ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಚಿನ್ನ ಕಳೆದುಕೊಂಡು ಪರದಾಡುತ್ತಿರುವ ಜನರು ಇದೀಗ ಪೊಲೀಸ್ ಠಾಣೆಗಳ ಮೆಟ್ಟಿಲೇರಿದ್ದಾರೆ. ಎನ್‌ಸಿಆರ್ ದಾಖಲಾಗಿದ್ದು, ಸುಮಾರು 6 ಪೊಲೀಸ್ ಠಾಣೆಗಳಲ್ಲಿ ತೇಜಸ್ ಗೌಡ ವಿರುದ್ಧ ದೂರುಗಳು ದಾಖಲಾಗಿವೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಮಂಗಳೂರು : ಡ್ಯಾಂ ಬಳಿ ಸ್ನಾನಕ್ಕಿಳಿದ ಇಬ್ಬರು ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ಸಾವು!



















