ಬೆಂಗಳೂರು : ಇಸ್ರೋದ ಕ್ಯಾಂಪಸ್ ಮೇಲೆ ಡ್ರೋನ್ ಹಾರಾಟ ನಡೆಸಿರುವ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮೇ 2ರಂದು ಬೆಳಿಗ್ಗೆ 8:16ರ ಸುಮಾರಿಗೆ ಕಾರ್ತಿಕ್ ನಗರದ ಇಸ್ರೋದ ಉಪಗ್ರಹ ಏಕೀಕರಣ ಮತ್ತು ಪರೀಕ್ಷಾ ಕೇಂದ್ರದ ಮೇಲೆ ಸುಮಾರು 80ರಿಂದ 100 ಅಡಿಗಳ ಮೇಲೆ 10-12 ಸೆಕೆಂಡ್‌ಗಳ ಕಾಲ ಅಪರಿಚಿತರು ಡ್ರೋನ್ ಹಾರಿಸಿರುವುದು ವರದಿಯಾಗಿದೆ. ಸಿಐಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ ನೀಡಿರುವ ದೂರಿನನ್ವಯ ಹೆಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ರೋದ ಕ್ಯಾಂಪಸ್ ಸೂಕ್ಷ್ಮ ಪ್ರದೇಶವಾಗಿದ್ದು, ನೋ-ಡ್ರೋನ್ ವಲಯವಾಗಿ ಗುರುತಿಸಲ್ಪಟ್ಟಿದೆ. ಅನುಮತಿಯಿಲ್ಲದೆ ವಾಯು ಚಟುವಟಿಕೆಗಳು ಭದ್ರತೆ ಮತ್ತು ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತವೆ. ಆದ್ದರಿಂದ ನೋ-ಡ್ರೋನ್ ವಲಯದಲ್ಲಿ ಡ್ರೋನ್ ಹಾರಾಟ ಮಾಡಿರುವ ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನನ್ವಯ ಭಾರತೀಯ ನ್ಯಾಯಸಂಹಿತೆ ಕಾಯ್ದೆ 329(3) – ಅಪರಾಧಿಕ ಅತಿಕ್ರಮಣ ಹಾಗೂ ಏರ್‌ಕ್ರಾಫ್ಟ್ ಕಾಯ್ದೆ 11A – ಅಧಿಕೃತ ಸುರಕ್ಷತಾ ನಿರ್ದೇಶನಗಳ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಶಾಸಕರಿಗೆ ಉಚಿತ ಟಿಕೆಟ್ ವಿವಾದ ; ಬೆಂಗಳೂರಲ್ಲಿ IPL ಫೈನಲ್ ಪಂದ್ಯ ಆಯೋಜನೆ ಅನುಮಾನ


















