ಬೆಂಗಳೂರು : ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮಾಜಿ ನಾಯಕ, ಲೆಜೆಂಡರಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಆಟ ಕಣ್ತುಂಬಿಕೊಳ್ಳಲು ಕಾಯುತ್ತಿರುವ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಋತುವಿನಲ್ಲಿ ಮೇ 5ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಮಹತ್ವದ ಪಂದ್ಯದಿಂದಲೂ ಎಂಎಸ್ ಧೋನಿ ಹೊರಗುಳಿದಿದ್ದಾರೆ. ತಂಡವು ಪಂದ್ಯವನ್ನಾಡಲು ದೆಹಲಿಗೆ ಪ್ರಯಾಣ ಬೆಳೆಸಿದ್ದರೂ, ಧೋನಿ ಮಾತ್ರ ತಂಡದೊಂದಿಗೆ ತೆರಳದೆ ಚೆನ್ನೈನಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಟೂರ್ನಿಯ ಆರಂಭದಲ್ಲೇ ಕಾಲಿನ ಸ್ನಾಯು ಸೆಳೆತಕ್ಕೆ (ಕಾಫ್ ಇಂಜುರಿ) ಒಳಗಾಗಿದ್ದ ಧೋನಿ, ಪ್ರಸ್ತುತ ಚೆನ್ನೈನಲ್ಲಿಯೇ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಅವರು ಇದುವರೆಗೂ ಒಂದೇ ಒಂದು ಪಂದ್ಯವನ್ನಾಡಿಲ್ಲ. ಗಾಯದ ಗಂಭೀರತೆಯ ಕುರಿತು ಮಾಹಿತಿ ನೀಡಿರುವ ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್, ಧೋನಿ ಚೇತರಿಸಿಕೊಳ್ಳುತ್ತಿದ್ದರಾದರೂ ಅಭ್ಯಾಸ ಪಂದ್ಯದ ವೇಳೆ ಮತ್ತೆ ಗಾಯಗೊಂಡಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ಅವಸರದಲ್ಲಿ ಕಣಕ್ಕಿಳಿದು ಸ್ನಾಯು ಸೆಳೆತದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದರೆ ಅವರು ಇಡೀ ಟೂರ್ನಿಯಿಂದಲೇ ಹೊರಬೀಳುವ ಅಪಾಯವಿದೆ. ಈ ಕಾರಣದಿಂದಾಗಿ ಫ್ರಾಂಚೈಸಿಯು ತೀವ್ರ ಎಚ್ಚರಿಕೆ ವಹಿಸಿದ್ದು, ಗಾಯದ ತೀವ್ರತೆಯಿಂದಾಗಿ ನಿರೀಕ್ಷೆಗಿಂತ ಹೆಚ್ಚು ಸಮಯ ಚೇತರಿಕೆಗೆ ಬೇಕಾಗುತ್ತಿದೆ ಎಂಬುದನ್ನು ಫ್ಲೆಮಿಂಗ್ ಒಪ್ಪಿಕೊಂಡಿದ್ದಾರೆ.
ಸಂಜು ಸ್ಯಾಮ್ಸನ್ ಭರ್ಜರಿ ಫಾರ್ಮ್ ಹಾಗೂ ಸಿಎಸ್‌ಕೆ ಪ್ರದರ್ಶನ
ಧೋನಿ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊತ್ತಿರುವ ಪ್ರತಿಭಾವಂತ ಆಟಗಾರ ಸಂಜು ಸ್ಯಾಮ್ಸನ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಋತುವಿನಲ್ಲಿ ಸಿಎಸ್‌ಕೆ ಪರ ಕಣಕ್ಕಿಳಿದಿರುವ ಸ್ಯಾಮ್ಸನ್, ಆಡಿರುವ ಕೇವಲ 9 ಪಂದ್ಯಗಳಲ್ಲಿ ಬರೋಬ್ಬರಿ 315 ರನ್ ಸಿಡಿಸಿದ್ದು, ಇದರಲ್ಲಿ ಎರಡು ಆಕರ್ಷಕ ಶತಕಗಳೂ ಸೇರಿವೆ. ಮತ್ತೊಂದೆಡೆ, ಆರಂಭಿಕ ಹಿನ್ನಡೆಯ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಕಳೆದೆದು ಪಂದ್ಯಗಳ ಪೈಕಿ ಮೂರರಲ್ಲಿ ಜಯ ಸಾಧಿಸುವ ಮೂಲಕ ಲಯಕ್ಕೆ ಮರಳುವ ಮುನ್ಸೂಚನೆ ನೀಡಿದೆ. ಸದ್ಯ ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ಪ್ಲೇ-ಆಫ್ ಪ್ರವೇಶದ ದೃಷ್ಟಿಯಿಂದ ಮುಂಬರುವ ಪಂದ್ಯಗಳು ಸಿಎಸ್‌ಕೆಗೆ ನಿರ್ಣಾಯಕವಾಗಿವೆ.
ಇದನ್ನೂ ಓದಿ : ರಾಯಚೂರಲ್ಲಿ ಹೆಣ್ಣಿನ ವಿಚಾರಕ್ಕೆ ವ್ಯಕ್ತಿಯ ಹತ್ಯೆ!



















