ಬೆಳಗಾವಿ : ಅಳಿಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ವಿಡಿಯೋ ಕಾಲ್‌ನಲ್ಲಿ ಮಗು ತೋರಿಸಿಲ್ಲ ಎನ್ನುವ ಕಾರಣಕ್ಕೆ ಆಕ್ರೋಶಗೊಂಡ ಅರವಿಂದ ಗವಳಿ (26) ಎಂಬಾತ ಅತ್ತೆ ಮಹಾದೇವಿ (45) ಅವರಿಗೆ ಚಾಕು ಇರಿದಿದ್ದಾನೆ. ಸದ್ಯ ಮಹಾದೇವಿ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿ ಅರವಿಂದ ಗವಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅರವಿಂದ ಗವಳಿಯ ಪತ್ನಿಗೆ ಎರಡು ತಿಂಗಳ ಹಿಂದೆಯಷ್ಟೇ ಹೆರಿಗೆಯಾಗಿದ್ದು, ಆಕೆ ತವರು ಮನೆಯಲ್ಲಿದ್ದಳು. ಹೀಗಾಗಿ ಅರವಿಂದ ಪದೇಪದೆ ವಿಡಿಯೋ ಕಾಲ್ ಮಾಡಿ ಮಗುವನ್ನು ತೋರಿಸುವಂತೆ ಪಟ್ಟು ಹಿಡಿಯುತ್ತಿದ್ದ. ಹೀಗಾಗಿ ವಿಡಿಯೋ ಕಾಲ್‌ನಲ್ಲಿ ಮೊಬೈಲ್ ಹಿಡಿದು ಕೈ ನೋಯುತ್ತದೆ ಎಂದು ಹೇಳಿದ್ದ ಪತ್ನಿ ಹೇಳಿದ್ದಳು.
ಇದೇ ವಿಚಾರಕ್ಕೆ ಅತ್ತೆ ಮಹಾದೇವಿ ಗಂಡ-ಹೆಂಡತಿಯ ಮಧ್ಯೆ ಮೂಗೂ ತೂರಿಸಿದ್ದರು. ‘ಕೆಲಸ ಬಿಟ್ಟು ಸದಾ ಮೊಬೈಲ್ ಹಿಡಿದು ಕೂರಲು ಸಾಧ್ಯವಿಲ್ಲ, ದಿನಕ್ಕೆ ಒಂದು ಬಾರಿ ಮಾತ್ರ ಕಾಲ್ ಮಾಡು’ ಎಂದು ಅರವಿಂದ್‌ಗೆ ಬುದ್ದಿ ಹೇಳಿದ್ದರು. ಇದರಿಂದ ಸಿಟ್ಟಾದ ಅರವಿಂದ ಅತ್ತೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಇದಕ್ಕೆ ಅತ್ತೆಯೂ ಕೂಡ ‘ನನ್ನ ಮನೆ ಬಾಗಿಲಿಗೆ ಬಂದರೆ ಸುಮ್ಮನೆ ಬಿಡಲ್ಲ’ ಎಂದು ಎಚ್ಚರಿಸಿದ್ದರು. ಇದೇ ದ್ವೇಷದಲ್ಲಿ ಆಕೆಯ ಮನೆಗೆ ನುಗ್ಗಿದ ಅರವಿಂದ, ಅತ್ತೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಸದ್ಯ ತೀವ್ರವಾಗಿ ಗಾಯಗೊಂಡಿರುವ ಮಹಾದೇವಿ ಅವರು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಷ್ಟಕ್ಕೇ ಸುಮ್ಮನಾಗದ ಅರವಿಂದ, ಅತ್ತೆಗೆ ಚಾಕುವಿನಿಂದ ಇರಿದ ಬಳಿಕ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾನೆ. ‘‘ಇಂದು ಜೈಲು, ನಾಳೆ ಬೇಲ್… ನಿನ್ನನ್ನು ಬಿಡಲ್ಲ’’ ಎಂದು ಬರೆದುಕೊಂಡು ತನ್ನ ವಿಕೃತಿ ಮೆರೆದಿದ್ದಾನೆ ಎಂದು ತಿಳಿದುಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಮುರಗೋಡ ಪೊಲೀಸರು ಆರೋಪಿ ಅರವಿಂದನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ಘೋರ ದುರಂತ.. ಬಾತುಕೋಳಿ ಹಿಡಿಯಲು ಹೋಗಿ ನಾಲ್ವರು ಮಕ್ಕಳು ನೀರುಪಾಲು!



















