ಅಹಮದಾಬಾದ್ : ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಮೈದಾನದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ರೋಚಕ ಗೆಲುವಿನ ಬಳಿಕವೂ ತಮ್ಮ ಎದುರಾಳಿಯನ್ನು ಕಾಲೆಳೆಯುವ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಗಿಲ್ ಹೊಸ ಅಲೆ ಸೃಷ್ಟಿಸಿದ್ದಾರೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳನ್ನು ಮಣಿಸಿದಾಗಲೆಲ್ಲಾ ವಿಭಿನ್ನ ಪೋಸ್ಟ್‌ಗಳ ಮೂಲಕ ಎದುರಾಳಿ ತಂಡದ ಅಭಿಮಾನಿಗಳನ್ನು ಛೇಡಿಸುತ್ತಿರುವ ಗಿಲ್, ಇದೀಗ ಪಂಜಾಬ್ ವಿರುದ್ಧದ ಗೆಲುವನ್ನು ಸಂಭ್ರಮಿಸಿದ ಪರಿಯೂ ಕ್ರೀಡಾ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪಂಜಾಬ್‌ಗೆ ಗಿಲ್ ಕೀಟಲೆ
ಅಹಮದಾಬಾದ್‌ನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ಕೆಲವೇ ಹೊತ್ತಿನಲ್ಲಿ ಶುಭಮನ್ ಗಿಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಸಹ ಆಟಗಾರರಾದ ವಾಷಿಂಗ್ಟನ್ ಸುಂದರ್ ಹಾಗೂ ಸಾಯಿ ಸುದರ್ಶನ್ ಅವರೊಂದಿಗೆ ಇರುವ ಫೋಟೋವನ್ನು ಪ್ರಕಟಿಸಿರುವ ಅವರು, ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ಭಂಗಿಯನ್ನು ಅನುಕರಿಸಿದ್ದಾರೆ. ಜೊತೆಗೆ “ಬಸ್ ಜೀತ್ನಾ ಹೈ. ಆವಾ ದೇ” (ಕೇವಲ ಗೆಲ್ಲಬೇಕು. ಬರಲಿ) ಎಂದು ಶೀರ್ಷಿಕೆ ನೀಡುವ ಮೂಲಕ ಪಂಜಾಬ್ ತಂಡಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಯಾವುದೇ ಅಬ್ಬರವಿಲ್ಲದೆ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಎದುರಾಳಿಯನ್ನು ಕಾಲೆಳೆಯುವ ಗಿಲ್ ಅವರ ಈ ನಡೆಯನ್ನು ಗುಜರಾತ್ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಮುಂದುವರಿದ ಕಾಲೆಳೆಯುವ ಚಾಳಿ
ಶುಭಮನ್ ಗಿಲ್ ಎದುರಾಳಿ ತಂಡವನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಕೆಣಕುತ್ತಿರುವುದು ಇದೇ ಮೊದಲೇನಲ್ಲ. ಈ ಆವೃತ್ತಿಯುದ್ದಕ್ಕೂ ಅವರು ಇದೇ ತಂತ್ರವನ್ನು ಅನುಸರಿಸಿಕೊಂಡು ಬಂದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚೆಪಾಕ್ ಕ್ರೀಡಾಂಗಣದಲ್ಲಿ ಗೆಲುವು ಸಾಧಿಸಿದಾಗ, ಚೆನ್ನೈ ತಂಡದ ಪ್ರಸಿದ್ಧ ‘ವಿಸಿಲ್ ಪೋಡು’ ಸಂಸ್ಕೃತಿಯನ್ನು ಬಿಂಬಿಸುವ ಹಳದಿ ಬಣ್ಣದ ಸಿಳ್ಳೆಯನ್ನು ಹಿಡಿದು “ನಂಡ್ರಿ ಚೆನ್ನೈ” (ಧನ್ಯವಾದಗಳು ಚೆನ್ನೈ) ಎಂದು ಪೋಸ್ಟ್ ಮಾಡಿದ್ದರು. ಅದೇ ರೀತಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿದ ಬಳಿಕ ವಿರಾಟ್ ಕೊಹ್ಲಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡು “ಪ್ಲೇ ಬೋಲ್ಡ್” ಎಂದು ಆರ್‌ಸಿಬಿಯ ಟ್ಯಾಗ್‌ಲೈನ್ ಅನ್ನೇ ಬಳಸಿ ಛೇಡಿಸಿದ್ದರು. ಇದೀಗ ಪಂಜಾಬ್ ವಿರುದ್ಧವೂ ಅದೇ ಚಾಳಿಯನ್ನು ಮುಂದುವರಿಸಿದ್ದು, ಪ್ರತಿ ಬಾರಿಯೂ ಎದುರಾಳಿಗಳನ್ನು ಅವರದೇ ಶೈಲಿಯಲ್ಲಿ ಅಣಕಿಸುವ ಮೂಲಕ ಹೊಸ ಸಂಚಲನ ಮೂಡಿಸುತ್ತಿದ್ದಾರೆ.
ಪಂಜಾಬ್‌ಗೆ ಸೋಲುಣಿಸಿದ ಗುಜರಾತ್ ಟೈಟನ್ಸ್
ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಈ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು. ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ, ಜೇಸನ್ ಹೋಲ್ಡರ್ ಅವರ (24ಕ್ಕೆ 4) ಘಾತಕ ಬೌಲಿಂಗ್ ದಾಳಿಗೆ ನಲುಗಿ ಕೇವಲ 47 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಸೂರ್ಯನ್ಶ್ ಶೆಡ್ಗೆ (57) ಹಾಗೂ ಮಾರ್ಕಸ್ ಸ್ಟೋಯ್ನಿಸ್ (40) ಅವರ ಹೋರಾಟದ ನೆರವಿನಿಂದ ಚೇತರಿಸಿಕೊಂಡು 9 ವಿಕೆಟ್ ನಷ್ಟಕ್ಕೆ 163 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಪರ ಸಾಯಿ ಸುದರ್ಶನ್ 41 ಎಸೆತಗಳಲ್ಲಿ 57 ರನ್ ಸಿಡಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಅಂತಿಮ ಹಂತದಲ್ಲಿ ಪಂದ್ಯ ರೋಚಕ ಘಟ್ಟ ತಲುಪಿದ್ದಾಗ ಕ್ರೀಸ್‌ನಲ್ಲಿದ್ದ ವಾಷಿಂಗ್ಟನ್ ಸುಂದರ್ ಕೇವಲ 23 ಎಸೆತಗಳಲ್ಲಿ ಅಜೇಯ 40 ರನ್ ಚಚ್ಚುವ ಮೂಲಕ, ಇನ್ನೊಂದು ಎಸೆತ ಬಾಕಿ ಇರುವಂತೆಯೇ ಗುಜರಾತ್‌ಗೆ ಜಯ ತಂದುಕೊಟ್ಟರು.
ಇದನ್ನೂ ಓದಿ : ಬಂಗಾಳ ಫಲಿತಾಂಶದಿಂದ ಬಾಂಗ್ಲಾ, ಪಾಕ್‌ಗೆ ಆಘಾತವಾಗಿದೆ, ಡಿಎಂಕೆ ಗೂಡು ಸೇರಿದೆ ; ಆರ್.ಅಶೋಕ್



















