ಚಾಮರಾಜನಗರ : ಜಿಲ್ಲೆಯ ಕುದೇರು ಭಾಗದಲ್ಲಿ ಸಿನಿಮೀಯ ಸ್ಟೈಲ್‌ನಲ್ಲಿ ಗ್ರಾಮಸ್ಥರು ಕಳ್ಳರನ್ನು ಬೆನ್ನಟ್ಟಿ ಹಿಡಿದ ಘಟನೆ ನಡೆದಿದೆ. ಚಾಮರಾಜನಗರ ತಾಲೂಕಿನ ಕುದೇರು ಸುತ್ತಮುತ್ತ ಪಂಪ್‌ಸೆಟ್ ಕೇಬಲ್ ವೈರ್ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರು ಸಿಕ್ಕಿಬಿದ್ದಿದ್ದಾರೆ.
ದೇಮಹಳ್ಳಿ ಗ್ರಾಮದಲ್ಲಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡ ಬಳಿಕ ಹಣ ನೀಡದೇ ಪರಾರಿಯಾಗಲು ಯತ್ನಿಸಿದ ಕಳ್ಳರ ಮೇಲೆ ಗ್ರಾಮಸ್ಥರಿಗೆ ಅನುಮಾನ ಬಂದಿದ್ದು, ತಕ್ಷಣವೇ ಎಚ್ಚೆತ್ತು ಕಳ್ಳರನ್ನು ಬೆನ್ನಟ್ಟಲು ಮುಂದಾಗಿದ್ದಾರೆ.
ಸುಮಾರು 16 ಕಿ.ಮೀ ದೂರ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಗ್ರಾಮಸ್ಥರು, ಕೊನೆಗೂ ಕಳ್ಳರನ್ನು ಹಿಡಿದಿದ್ದಾರೆ. ಬಳಿಕ ಕಳ್ಳರನ್ನು ಕುದೇರು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಪಂಪ್‌ಸೆಟ್ ಕೇಬಲ್ ವೈರ್ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ವರ್ಷಗಳಿಂದ ಈ ಭಾಗದಲ್ಲಿ ಪಂಪ್‌ಸೆಟ್ ಕೇಬಲ್ ವೈರ್ ಕಳ್ಳತನ ನಡೆಯುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಆರೋಪಿಗಳ ಬಂಧನದಿಂದ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಗಂಡ-ಹೆಂಡತಿ ಜಗಳದಲ್ಲಿ ಇಬ್ಬರು ಮಕ್ಕಳ ದಾರುಣ ಸಾವು!



















