ಮೈಸೂರು : ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿರುವ ಚಾಮರಾಜ ಬಲದಂಡೆ ನಾಲೆಯ ಏರಿಯ ಪಕ್ಕದ ಪೊದೆಯಲ್ಲಿ ಈ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿ ಸುಮಾರು 30 ವರ್ಷ ವಯಸ್ಸಿನವನಾಗಿದ್ದು, ಗುರುತು ಪತ್ತೆಯಾಗಿಲ್ಲ. ಶವವು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿರುವುದರಿಂದ ವ್ಯಕ್ತಿ ಮೃತಪಟ್ಟು ಹಲವು ದಿನಗಳಾಗಿರಬಹುದು ಎಂದು ಶಂಕಿಸಲಾಗಿದೆ.
ಇನ್ನು, ದುಷ್ಕರ್ಮಿಗಳು ವ್ಯಕ್ತಿಯ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಮೃತನ ಮೈಮೇಲೆ ಹಸಿರು ಹಾಗೂ ಕಪ್ಪು ಬಣ್ಣದ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಇದ್ದು, ಬಲಗೈ ರಟ್ಟೆಯಲ್ಲಿ “ಕೆಂಚ” ಎಂಬ ಹಚ್ಚೆ ಗುರುತು ಪತ್ತೆಯಾಗಿದೆ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಕೆ.ಆರ್.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೃತನ ಗುರುತು ಪತ್ತೆ ಹಾಗೂ ಹತ್ಯೆ ನಡೆದಿರಬಹುದಾ ಎಂಬ ಕುರಿತು ತನಿಖೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಕತ್ತು ಸೀಳಲ್ಪಟ್ಟು ಕೊಲೆಯಾದ ಪತ್ನಿಯ ಶವದ ಮುಂದೆ ಕಣ್ಣೀರಿಟ್ಟಿದ್ದ ಗಂಡನೇ ಹಂತಕ!



















