ಬೆಂಗಳೂರು : ಐಪಿಎಲ್ 2026ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಪರ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚುತ್ತಿರುವ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಹೆನ್ರಿಕ್ ಕ್ಲಾಸೆನ್ ಅವರ ಅಂತಾರಾಷ್ಟ್ರೀಯ ನಿವೃತ್ತಿ ವಾಪಸಾತಿ ಕುರಿತು ಇದೀಗ ತೀವ್ರ ಚರ್ಚೆ ಶುರುವಾಗಿದೆ.
ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದಲ್ಲಿ ಕ್ಲಾಸೆನ್ ಅವರ ಮ್ಯಾಚ್-ವಿನ್ನಿಂಗ್ ಪ್ರದರ್ಶನವನ್ನು ನೋಡಿದ ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಕ್ಲಾಸೆನ್ ಅವರನ್ನು ಹೇಗಾದರೂ ಮಾಡಿ ಒಪ್ಪಿಸಿ, 2027ರಲ್ಲಿ ತವರಿನಲ್ಲಿಯೇ ನಡೆಯಲಿರುವ ಏಕದಿನ ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳುವಂತೆ ಪೀಟರ್ಸನ್ ಆಗ್ರಹಿಸಿದ್ದಾರೆ.
ಏಪ್ರಿಲ್ 29ರಂದು ಮುಂಬೈ ಇಂಡಿಯನ್ಸ್ ನೀಡಿದ್ದ ಗುರಿಯನ್ನು ಬೆನ್ನಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ಲಾಸೆನ್ ಆಟಕ್ಕೆ ಪೀಟರ್ಸನ್ ಫಿದಾ ಆಗಿದ್ದಾರೆ. ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, “ದಕ್ಷಿಣ ಆಫ್ರಿಕಾ ಇದುವರೆಗೆ ಯಾವುದೇ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ತಕ್ಷಣವೇ ಕ್ಲಾಸೆನ್ ಅವರಿಗೆ ಕರೆ ಮಾಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವಂತೆ ಕೇಳಿಕೊಳ್ಳಬೇಕು.
ಮುಂಬರುವ ತವರಿನ ವಿಶ್ವಕಪ್ ಅಭಿಯಾನದಲ್ಲಿ ಕ್ಲಾಸೆನ್ ಅತ್ಯಂತ ಪ್ರಮುಖ ಅಸ್ತ್ರವಾಗಬಲ್ಲರು. ಸದ್ಯ ಅವರ ಫಾರ್ಮ್ ಗಮನಿಸಿದರೆ, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅವರು ಎಂತಹ ಬದಲಾವಣೆ ತರಬಲ್ಲರು ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಪ್ರತಿಭಾನ್ವಿತ ಆಟಗಾರರು ಪದೇ ಪದೇ ಸಿಗುವುದಿಲ್ಲ, ಅವರ ಉಪಸ್ಥಿತಿಯು ದಕ್ಷಿಣ ಆಫ್ರಿಕಾದ ಗೆಲುವಿನ ಅವಕಾಶವನ್ನು ದ್ವಿಗುಣಗೊಳಿಸಲಿದೆ,” ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ದಕ್ಷಿಣ ಆಫ್ರಿಕಾ ತಂಡವು 1998ರ ಬಳಿಕ ಯಾವುದೇ ಐಸಿಸಿ ಸೀಮಿತ ಓವರ್‌ಗಳ ಟ್ರೋಫಿ ಗೆದ್ದಿಲ್ಲ, ಜೊತೆಗೆ 2024ರ ಟಿ20 ವಿಶ್ವಕಪ್ ಫೈನಲ್‌ನಲ್ಲಿಯೂ ಭಾರತದ ಎದುರು ವೀರೋಚಿತ ಸೋಲು ಕಂಡಿತ್ತು. ಈ ಹಿನ್ನೆಲೆಯಲ್ಲಿ ಪೀಟರ್ಸನ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಕ್ಲಾಸೆನ್ ಸ್ಪಷ್ಟನೆ ಏನು?
ಈ ಎಲ್ಲಾ ಚರ್ಚೆಗಳು ಹಾಗೂ ಅಭಿಮಾನಿಗಳ ಒತ್ತಾಯಗಳಿಗೆ ಸ್ವತಃ ಹೆನ್ರಿಕ್ ಕ್ಲಾಸೆನ್ ಅವರೇ ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆದಿದ್ದಾರೆ. ಪ್ರಸ್ತುತ ಐಪಿಎಲ್‌ನಲ್ಲಿ 157.41ರ ಅತ್ಯುತ್ತಮ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 414 ರನ್ ಸಿಡಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ತಮ್ಮದೇ ತಂಡದ ಅಭಿಷೇಕ್ ಶರ್ಮಾ ಅವರ ಹಿಂದಿರುವ ಕ್ಲಾಸೆನ್, ನಿವೃತ್ತಿ ವಾಪಸ್ ಪಡೆಯುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ನನ್ನ ಸ್ನೇಹಿತರು ವಿಶ್ವಕಪ್ ಆಡುವುದನ್ನು ನೋಡಿದಾಗ ನನಗೂ ತಂಡಕ್ಕೆ ಮರಳಬೇಕು ಎಂಬ ಆಲೋಚನೆ ಮೂಡಿದ್ದು ನಿಜ. ಈ ಬಗ್ಗೆ ಐಡೆನ್ ಮಾರ್ಕ್ರಮ್ ಜೊತೆಗೂ ಮಾತನಾಡಿದ್ದೆ. ಆದರೆ, ನನಗೆ ನನ್ನ ಕುಟುಂಬದ ಜವಾಬ್ದಾರಿಗಳು ಹಾಗೂ ಅವರೊಂದಿಗೆ ಸಮಯ ಕಳೆಯುವುದು ಅತ್ಯಂತ ಮುಖ್ಯವಾಗಿದೆ. ಹಾಗಾಗಿ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಿಂತಿರುಗುವ ನಿರ್ಧಾರವನ್ನು ಕೈಬಿಟ್ಟಿದ್ದೇನೆ,” ಎಂದು ಅವರು ಖಚಿತಪಡಿಸಿದ್ದಾರೆ. ಪ್ರಸಕ್ತ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿರುವ ಕ್ಲಾಸೆನ್, ಮೇ 3ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಇದನ್ನೂ ಓದಿ : ಅಮೆರಿಕ ನೌಕಾಪಡೆಗೆ ಇರಾನ್ ಬೆಂಬಲಿತ ಹ್ಯಾಕರ್ಸ್ ಕನ್ನ : 2,000ಕ್ಕೂ ಹೆಚ್ಚು ಯೋಧರ ಖಾಸಗಿ ಮಾಹಿತಿ ಸೋರಿಕೆ!



















