ಬೆಂಗಳೂರು: ತಾಯಿ ಜೊತೆ ನಗುನಗುತ್ತಾ ಮಾತನಾಡುತ್ತಿರುವಾಗಲೇ ಬ್ರೈನ್ ಸ್ಟ್ರೋಕ್ ಆಗಿ ಚಿಕಿತ್ಸೆ ಫಲಕಾರಿಯಾಗದೇ ಟೆಕ್ಕಿ ಯುವತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಹಾಸನ ಜಿಲ್ಲೆಯ ಶ್ವೇತಾ (25) ಮೃತ ಟೆಕ್ಕಿ. ಏ.25ರ ಶನಿವಾರ ಕೆಲಸ ಮುಗಿಸಿ ಮನೆಗೆ ಬಂದ ಶ್ವೇತಾ ತಾಯಿಯ ಜೊತೆ ನಗುನಗುತ್ತಾ ಮಾತನಾಡುತ್ತಿರುವಾಗಲೇ ಏಕಾಏಕಿ ಕುಸಿದು ಬಿದ್ದು ಮಾತನಾಡಲಾರದ ಸ್ಥಿತಿ ತಲುಪಿದ್ದರು. ಬೆಂಗಳೂರಿಗೆ ಕರೆತರುವಾಗಲೇ ಶ್ವೇತಾ ಕೋಮಾಗೆ ಜಾರಿದ್ದರು. ದುಃಖದ ಮಧ್ಯೆಯೇ ಬ್ರೈನ್ ನಿಷ್ಕ್ರಿಯಗೊಂಡಿದ್ದರಿಂದ ಪೋಷಕರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು.

ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಶ್ವೇತಾ ಮೃತಪಟ್ಟಿದ್ದಾರೆ. ಹೀಗಾಗಿ ಅಂಗಾಂಗ ದಾನ ನಡೆಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಒಬ್ಬಳೇ ಪುತ್ರಿಯನ್ನು ಕಳೆದುಕೊಂಡು ಹೆತ್ತವರು ಕಂಗಾಲಾಗಿದ್ದಾರೆ. ಸದ್ಯ ಶ್ವೇತಾ ಮೃತದೇಹವನ್ನು ಹಾಸನಕ್ಕೆ ಶಿಫ್ಟ್ ಮಾಡಲಾಗಿದೆ.

ಹಾಸನದಲ್ಲಿ ಸರಣಿ ಹೃದಯಘಾತಕ್ಕೆ ಯುವಜನತೆ ಬಲಿಯಾಗಿ ಆತಂಕ ಸೃಷ್ಟಿಯಾಗಿತ್ತು. ಈಗ ಶ್ವೇತಾ ಪ್ರಕರಣವೂ ಆತಂಕಕ್ಕೆ ಕಾರಣವಾಗಿದೆ. ಯಾವುದೇ ಅನಾರೋಗ್ಯ ಸಮಸ್ಯೆ ಅಥವಾ ಸಣ್ಣ ಗುಣಲಕ್ಷಣಗಳು ಇಲ್ಲದೇ ಆರೋಗ್ಯವಾಗಿದ್ದ ಶ್ವೇತಾ ಏಕಾಏಕಿ ಬ್ರೈನ್ ಸ್ಟ್ರೋಕ್‌ನಿಂದ ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ.
ಇದನ್ನೂ ಓದಿ: ಟ್ರಂಪ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: ದಾಳಿಕೋರನ ‘ಟಾರ್ಗೆಟ್’ ಲಿಸ್ಟ್‌ನಲ್ಲಿ ಇರದ ಏಕೈಕ ಹೆಸರು ಕಶ್ ಪಟೇಲ್!



















