ಬೆಂಗಳೂರು: ದೇಶದಲ್ಲಿ ಆನ್ ಲೈನ್ ಗೇಮಿಂಗ್ ಮಾಡಿದ ಅವಾಂತರಗಳು ಒಂದೆರಡಲ್ಲ. ಹಣಕಾಸು ವಹಿವಾಟು ಆಧಾರಿತ ಆನ್ ಲೈನ್ ಗೇಮ್ ಗಳಿಂದಾಗಿ ಮಕ್ಕಳು ಪೋಷಕರ ಲಕ್ಷಾಂತರ ರೂಪಾಯಿ ಕಳೆದಿದ್ದಾರೆ. ಗೇಮಿಂಗ್ ಗೀಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಇದನ್ನು ತಡೆಗಟ್ಟುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಮೇ 1ರಿಂದ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇದು ಮಕ್ಕಳು, ಯುವಕ-ಯುವತಿಯರು ಗೇಮಿಂಗ್ ಮೂಲಕ ದುಡ್ಡು ಕಳೆದುಕೊಳ್ಳುವುದನ್ನು ನಿಯಂತ್ರಿಸುತ್ತದೆ.
ಕೇಂದ್ರ ಸರ್ಕಾರವು ‘ಆನ್ ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ 2025’ರ ಅಡಿಯಲ್ಲಿ ಹೊಸ ನಿಯಮಗಳ ಜಾರಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿದೆ. ಹಣಕಾಸು ಆಧಾರಿತ ಗೇಮ್ ಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಕಾಯ್ದೆಯ ಪ್ರಮುಖ ಗುರಿಯಾಗಿದೆ. ಹಾಗೆಯೇ, ಆನ್ ಲೈನ್ ಗೇಮ್ ಗಳ ಮೇಲೆ ನಿಗಾ ಇರಿಸಲು ಇದೇ ಮೊದಲ ಬಾರಿಗೆ ಆನ್ ಲೈನ್ ಗೇಮಿಂಗ್ ಪ್ರಾಧಿಕಾರ (OGAI)ವನ್ನು ರಚಿಸಲಾಗಿದೆ. ಇದು ಹಣದ ವಹಿವಾಟು, ಅಕ್ರಮ ನಿಯಂತ್ರಿಸಲು ನೆರವಾಗಲಿದೆ.
ಇ-ಸ್ಪೋರ್ಟ್ಸ್ ಗೇಮ್ ಗಳ ನಿಯಂತ್ರಣಕ್ಕಾಗಿ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಹಾಗೆಯೇ, ಸೋಷಿಯಲ್ ಗೇಮಿಂಗ್ ಸಂಸ್ಥೆಗಳು, ಶಿಕ್ಷಣದ ಉದ್ದೇಶಕ್ಕಾಗಿ ಗೇಮ್ ಗಳನ್ನು ಅಭಿವೃದ್ಧಿಪಡಿಸುವ ಕಂಪನಿಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಲ್ಲ ಎಂದು ತಿಳಿಸಲಾಗಿದೆ. ಹೊಸ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಮತ್ತು ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಮತ್ತು ಸೈಬರ್ ಸೆಲ್ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ಆನ್ ಲೈನ್ ಗೇಮಿಂಗ್ ಕಂಪನಿಗಳು ತಮ್ಮ ಬಳಕೆದಾರರಿಗೆ ಕಡ್ಡಾಯ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಕೇವಲ ಮೊಬೈಲ್ ಸಂಖ್ಯೆ ಇದ್ದರೆ ಸಾಲದು, ಆಧಾರ್ ಅಥವಾ ಪ್ಯಾನ್ ಕಾರ್ಡ್ ಮೂಲಕ ಗುರುತಿನ ಚೀಟಿ ದೃಢೀಕರಿಸುವುದು ಅವಶ್ಯಕವಾಗಿದೆ. ಆನ್ ಲೈನ್ ಗೇಮಿಂಗ್ ಕ್ಷೇತ್ರಕ್ಕೆ ಸ್ಪಷ್ಟ ಮತ್ತು ಸಮತೋಲಿತ ನಿಯಂತ್ರಣದ ಚೌಕಟ್ಟು ವಿಧಿಸಲಾಗಿದೆ. ಇದರಿಂದ ಕಂಪನಿಗಳ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಬರಲಿದ್ದು, ಬಳಕೆದಾರರ ಸುರಕ್ಷತೆಯೂ ಹೆಚ್ಚಲಿದೆ. ಅಗತ್ಯ ಬಿದ್ದಾಗ ಯಾವುದೇ ಗೇಮ್ ಅನ್ನು ನಿಯಂತ್ರಿಸುವ ಅಧಿಕಾರವನ್ನು ಸರ್ಕಾರ ಹೊಂದಿರುತ್ತದೆ.
ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್ : ಸಿಗಲಿದೆ 25 ಸಾವಿರ ರೂ. ವಿದ್ಯಾರ್ಥಿವೇತನ ; ಹೀಗೆ ಅರ್ಜಿ ಸಲ್ಲಿಸಿ



















