ಬೆಂಗಳೂರು : ನಿಮ್ಮ ಮಗುವಿನ ವಯಸ್ಸು 5-17ವರ್ಷದೊಳಗೆ ಇದೆಯೇ? ಹಾಗಾದರೆ, ನಿಮಗೊಂದು ಮಹತ್ವದ ಅಪ್ಡೇಟ್ ಇದೆ. 5 ರಿಂದ 17 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಈಗ ಕಡ್ಡಾಯವಾಗಿದೆ. ಹಾಗಾಗಿ, ಪೋಷಕರು ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸುವುದು ಈಗ ಅಗತ್ಯವಾಗಿದೆ. ಮಕ್ಕಳ ಆಧಾರ್ ಅಪ್ಡೇಟ್ ಮಾಡಲು 2026ರ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನಿಯಮದಂತೆ ಮಕ್ಕಳ ಜೀವನದಲ್ಲಿ ಎರಡು ಬಾರಿ ಕಡ್ಡಾಯವಾಗಿ ಬಯೋಮೆಟ್ರಿಕ್ ಅಪ್ಡೇಟ್ (Mandatory Biometric Update) ಮಾಡಿಸಬೇಕು. ಮಗು 5 ವರ್ಷಕ್ಕಿಂತ ಕಡಿಮೆ ವಯಸ್ಸಿದ್ದಾಗ ಹಾಗೂ 5ರಿಂದ 17 ವರ್ಷದೊಳಗಾಗಿ ಮತ್ತೊಮ್ಮೆ ಅಪ್ಡೇಟ್ ಮಾಡಿಸುವುದು ಕಡ್ಡಾಯ. ಇದುವರೆಗೆ ಶಾಲೆಗಳಲ್ಲಿಯೇ ಅಪ್ಡೇಟ್ ಮಾಡಬಹುದಿತ್ತು. ಈಗ ಪೋಷಕರು ಮಕ್ಕಳನ್ನು ಸಮೀಪದ ಆಧಾರ್ ಸೇವಾ ಕೇಂದ್ರಗಳಿಗೆ ತೆರಳಿ ಅಪ್ಡೇಟ್ ಮಾಡಿಸಬಹುದು.
ಮಕ್ಕಳ ಶಾಲೆ-ಕಾಲೇಜು ಪ್ರವೇಶಾತಿ, ಸರ್ಕಾರದ ಸ್ಕಾಲರ್ ಶಿಪ್, ಯಾವುದೇ ತರಬೇತಿ ಯೋಜನೆಗಳನ್ನು ಪಡೆಯಲು ಆಧಾರ್ ಕಾರ್ಡ್ ಮಹತ್ವದ ದಾಖಲೆಯಾಗಿದೆ. ಹಾಗಾಗಿ, ಪೋಷಕರು ಮಕ್ಕಳ ಆಧಾರ್ ಅಪ್ಡೇಟ್ ಮಾಡಿಸುವುದು ಮುಖ್ಯವಾಗಿದೆ. ಇಲ್ಲದಿದ್ದರೆ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ದೊರಕುವುದಿಲ್ಲ ಎಂಬುದನ್ನು ಪೋಷಕರು ಗಮನದಲ್ಲಿ ಇಟ್ಟುಕೊಳ್ಳಬೇಕಿದೆ.
ಅಪ್ಡೇಟ್ ಮಾಡಿಸುವುದು ಹೇಗೆ?
ಪೋಷಕರು 5-17 ವರ್ಷದೊಳಗಿನ ಮಗ ಅಥವಾ ಮಗಳನ್ನು ಹತ್ತಿರದ ಆಧಾರ್ ಸೇವಾ ಕಚೇರಿ ಅಥವಾ ನಾಡ ಕಚೇರಿಗೆ ಕರೆದುಕೊಂಡು ಹೋಗಬೇಕು. ಅಧಿಕಾರಿಗಳಿಗೆ ಮಕ್ಕಳ ಹಳೆಯ ಆಧಾರ್ ಕಾರ್ಡ್ ಹಾಗೂ ಪೋಷಕರ ಗುರುತಿನ ಚೀಟಿ (ಆಧಾರ್) ನೀಡಬೇಕು. ಇದಾದ ಬಳಿಕ ಅಧಿಕಾರಿಗಳು ಮಕ್ಕಳ ಹೊಸ ಫೋಟೋ, 10 ಬೆರಳುಗಳ ಗುರುತು ಮತ್ತು ಕಣ್ಣಿನ ಸ್ಕ್ಯಾನ್ಅನ್ನು ಉಚಿತವಾಗಿ ತೆಗೆದುಕೊಳ್ಳುತ್ತಾರೆ. ಅಲ್ಲಿಗೆ ಆಧಾರ್ ಅಪ್ಡೇಟ್ ಪ್ರಕ್ರಿಯೆ ಮುಗಿಯುತ್ತದೆ.
ಇದನ್ನೂ ಓದಿ : ಕುಡಿಯುವ ನೀರಿಗಾಗಿ ಹಾಹಾಕಾರ – ಸಚಿವರ ಕಾರು ಅಡ್ಡಗಟ್ಟಿ ಮಹಿಳೆಯರ ಆಕ್ರೋಶ!



















