ನವದೆಹಲಿ : ರಾಜಧಾನಿ ದೆಹಲಿಯ ಅತಿ ಭದ್ರತೆಯ ಮತ್ತು ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಗಾಲ್ಫ್ ಲಿಂಕ್ಸ್‌ನಲ್ಲಿ ಭಾರೀ ದರೋಡೆ ಪ್ರಕರಣವೊಂದು ವರದಿಯಾಗಿದೆ. ಕೆಲಸಕ್ಕೆ ಸೇರಿದ ಕೇವಲ 5 ದಿನಗಳಲ್ಲೇ ಮನೆಗೆಲಸದವನೊಬ್ಬ ತನ್ನ ಸಹಚರರೊಂದಿಗೆ ಸೇರಿ, ಮಾಲೀಕರ ಕುಟುಂಬವನ್ನೇ ಒತ್ತೆಯಲ್ಲಿಟ್ಟುಕೊಂಡು ಬರೋಬ್ಬರಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಆಘಾತಕಾರಿ ಘಟನೆ ನಡೆದಿದೆ.
ಗುರುವಾರ ಸಂಜೆ 7.30ರಿಂದ 8 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ವೃದ್ಧ ದಂಪತಿ, ಅವರ ಸೊಸೆ ಹಾಗೂ ಮೊಮ್ಮಗು ಮನೆಯಲ್ಲಿದ್ದಾಗ, ಕೇವಲ 5 ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ಸುಶೀಲ್ ಎಂಬಾತ ಮನೆಗೆ ಬಂದಿದ್ದಾನೆ. ಕುಟುಂಬದವರು ಆತನಿಗೆ ಬಾಗಿಲು ತೆಗೆದ ತಕ್ಷಣ, ಆತನ ಹಿಂದೆ ಅಡಗಿದ್ದ ಐವರು ಮುಸುಕುಧಾರಿಗಳು ಒಳನುಗ್ಗಿದ್ದಾರೆ. ದೊಣ್ಣೆಗಳು ಹಾಗೂ ಬೀಗ ಒಡೆಯುವ ಆಯುಧಗಳನ್ನು ಹಿಡಿದು ಬಂದಿದ್ದ ದುಷ್ಕರ್ಮಿಗಳು, ಮನೆಯವರನ್ನು ಬೆದರಿಸಿ ಹಲ್ಲೆ ನಡೆಸಿದ್ದಾರೆ. ನಂತರ ಇಡೀ ಕುಟುಂಬವನ್ನು ಕೋಣೆಯೊಂದರಲ್ಲಿ ಕೂಡಿಹಾಕಿ, ಕೇವಲ 20-25 ನಿಮಿಷಗಳಲ್ಲಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಇದು ಸಂಪೂರ್ಣ ಪೂರ್ವನಿಯೋಜಿತ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.
ಹಿನ್ನೆಲೆ ಪರಿಶೀಲನೆ ಮಾಡದ್ದೇ ಮುಳುವಾಯಿತೇ?
ಸಹ-ಕೆಲಸಗಾರನೊಬ್ಬನ ಶಿಫಾರಸಿನ ಮೇರೆಗೆ ಸುಶೀಲ್‌ನನ್ನು ಕೇವಲ ಒಂದು ವಾರದ ಹಿಂದಷ್ಟೇ ಕೆಲಸಕ್ಕೆ ನಿಯೋಜಿಸಿಕೊಳ್ಳಲಾಗಿತ್ತು. ಆದರೆ ಆತನ ಯಾವುದೇ ಹಿನ್ನೆಲೆ ಪರಿಶೀಲನೆ (ಪೊಲೀಸ್ ವೆರಿಫಿಕೇಶನ್) ಮಾಡಿರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಘಟನೆ ಕುರಿತು ಮಾಹಿತಿ ನೀಡಿರುವ ನವದೆಹಲಿ ಡಿಸಿಪಿ ಸಚಿನ್ ಶರ್ಮಾ, “ಪ್ರಮುಖ ಆರೋಪಿಯನ್ನು ಗುರುತಿಸಲಾಗಿದೆ. ಆತನ ಯಾವುದೇ ಪೊಲೀಸ್ ಪರಿಶೀಲನೆ ನಡೆದಿಲ್ಲ. ಆರೋಪಿಗಳ ಪತ್ತೆಗಾಗಿ ಈಗಾಗಲೇ ಹಲವು ತಂಡಗಳನ್ನು ರಚಿಸಲಾಗಿದ್ದು, ಕೆಲ ಸುಳಿವುಗಳು ಲಭ್ಯವಾಗಿವೆ. ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಪ್ರತಿಷ್ಠಿತ ಪ್ರದೇಶದ ಭದ್ರತೆಯ ಬಗ್ಗೆಯೇ ಪ್ರಶ್ನೆ
ದರೋಡೆಗೊಳಗಾದ ಕುಟುಂಬವು ಮದ್ಯದ ವ್ಯವಹಾರ ನಡೆಸುತ್ತಿದ್ದು, ತುಘಲಕ್ ರಸ್ತೆಯ ಸಮೀಪ ವಾಸವಿದೆ. ಮನೆಯ ಯಜಮಾನ ಮದ್ಯ ಕಂಪನಿಯೊಂದರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ನಗರದ ಅತ್ಯಂತ ಬಿಗಿ ಭದ್ರತೆಯಿರುವ ಪ್ರದೇಶದಲ್ಲಿ ಇಂತಹ ಘಟನೆ ನಡೆದಿರುವುದು ಮತ್ತು ದರೋಡೆಕೋರರು ಯಾವುದೇ ಸುಳಿವು ಬಿಡದೆ ಪರಾರಿಯಾಗಿರುವುದು ಆ ಪ್ರದೇಶದ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ : ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಪ್ರಾಣಬಿಟ್ಟ ಯುವಕ!



















