ಬೆಂಗಳೂರು : ನಾಡಿನೆಲ್ಲೆಡೆ ಇದೇ ಸೋಮವಾರ ಅಕ್ಷಯ ತೃತೀಯ ಹಬ್ಬದ ಸಂಭ್ರಮ. ಹೀಗಾಗಿ ನಗರದಾದ್ಯಂತ ಜ್ಯುವೆಲ್ಲರಿ ಅಂಗಡಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ವಿಶೇಷ ಆಫರ್‌ಗಳೊಂದಿಗೆ ವ್ಯಾಪಾರ ಭರ್ಜರಿಯಾಗಿ ನಡೆಯುವ ನಿರೀಕ್ಷೆಯಿದೆ.
ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಲ್ಲಿ ಆಚರಿಸಲ್ಪಡುವ ಅಕ್ಷಯ ತೃತೀಯ ಹಬ್ಬಕ್ಕೆ ಹಿಂದು ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ದಿನ ಚಿನ್ನ ಖರೀದಿಸಿದರೆ ಮನೆಗೆ ಐಶ್ವರ್ಯ, ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇರುವುದರಿಂದ ಲಕ್ಷ್ಮಿ ಮತ್ತು ಕುಬೇರ ದೇವರ ಪೂಜೆ ವಿಶೇಷವಾಗಿ ನಡೆಯುತ್ತದೆ.
ಈ ಹಿನ್ನೆಲೆಯಲ್ಲಿ ನಗರದಲ್ಲಿನ ಚಿನ್ನದ ಅಂಗಡಿಗಳು ಈಗಾಗಲೇ ಸಜ್ಜಾಗಿದ್ದು, ಗ್ರಾಹಕರನ್ನು ಆಕರ್ಷಿಸಲು ವಿಭಿನ್ನ ವಿನ್ಯಾಸದ ಆಭರಣಗಳನ್ನು ಸ್ಟಾಕ್ ಮಾಡಿಕೊಂಡಿವೆ.
ಕಳೆದ ವರ್ಷ ಅಕ್ಷಯ ತೃತೀಯದಂದು ಸುಮಾರು 1 ಸಾವಿರ ಟನ್ ಚಿನ್ನ ಮಾರಾಟವಾಗಿ, ರಾಜ್ಯದಲ್ಲಿ ₹1500 ಕೋಟಿ ವ್ಯವಹಾರ ನಡೆದಿತ್ತು. ಈ ಬಾರಿ ಚಿನ್ನದ ಬೆಲೆ ಏರಿಕೆಯ ನಡುವೆಯೂ ಖರೀದಿ ಜೋರಾಗಿದ್ದು, 2ರಿಂದ 3 ಸಾವಿರ ಟನ್ ಚಿನ್ನ ಮಾರಾಟವಾಗುವ ಸಾಧ್ಯತೆ ಇದೆ. ಸುಮಾರು ₹1800 ಕೋಟಿ ವ್ಯಾಪಾರ ನಡೆಯಬಹುದು ಎಂದು ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ತಿಳಿಸಿದೆ.
ಇನ್ನು, ಈ ವರ್ಷ ಅಕ್ಷಯ ತೃತೀಯ ಎರಡು ದಿನಗಳ ಕಾಲ ಬರುವುದರಿಂದ, ವಾರಾಂತ್ಯದಿಂದಲೇ ವ್ಯಾಪಾರ ಚಟುವಟಿಕೆಗಳು ಹೆಚ್ಚಾಗಲಿವೆ. ಕಳೆದ ಕೆಲವು ದಿನಗಳಿಂದಲೇ ಗ್ರಾಹಕರು ಮುಂಗಡ ಬುಕ್ಕಿಂಗ್ ಮಾಡುತ್ತಿದ್ದು, ಕೆಲವರು ಆರು ತಿಂಗಳ ಹಿಂದೆಯೇ ಚಿನ್ನ ಕಾಯ್ದಿರಿಸಿಕೊಂಡಿದ್ದಾರೆ. ಪ್ರಸ್ತುತ 24 ಕ್ಯಾರೇಟ್ ಚಿನ್ನದ ಬೆಲೆ ಗ್ರಾಮ್‌ಗೆ ₹14,400 ರಷ್ಟಿದ್ದು, ದರ ಏರಿಕೆಯ ನಡುವೆಯೂ “ಒಂದು ಗ್ರಾಂ ಆದರೂ ಖರೀದಿ ಮಾಡಬೇಕು” ಎನ್ನುವ ಮನೋಭಾವ ಗ್ರಾಹಕರಲ್ಲಿ ಕಾಣಿಸುತ್ತಿದೆ.
ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಏರಿಳಿತ ಮುಂದುವರಿದಿರುವುದರಿಂದ, “ಇನ್ನಷ್ಟು ಏರಿಕೆಯಾಗುವ ಮೊದಲು ಖರೀದಿ ಮಾಡೋಣ” ಎಂಬ ಉದ್ದೇಶದಿಂದ ಜನರು ಅಂಗಡಿಗಳತ್ತ ಮುಖ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಸ್ವಲ್ಪ ಇಳಿಕೆ ಕಂಡಿದ್ದ ಬೆಲೆ ಮತ್ತೆ ಏರಿಕೆಯಾಗಿದೆ.
ಒಟ್ಟಿನಲ್ಲಿ, ಅಕ್ಷಯ ತೃತೀಯ ಹಬ್ಬದ ಹಿನ್ನೆಲೆಯಲ್ಲಿ ಚಿನ್ನದ ಮಾರುಕಟ್ಟೆ ಚುರುಕುಗೊಂಡಿದ್ದು, ಗ್ರಾಹಕರು ಮತ್ತು ವ್ಯಾಪಾರಿಗಳು ಎರಡೂ ವರ್ಗದವರಲ್ಲೂ ಉತ್ಸಾಹ ಮೆರೆಯುತ್ತಿದೆ.
ಇದನ್ನೂ ಓದಿ : ಕೊಹ್ಲಿ ಲೈಕ್ ವಿವಾದ : ಮೌನ ಮುರಿದ ಜರ್ಮನ್ ಇನ್‌ಫ್ಲುಯೆನ್ಸರ್ – ವೈರಲ್ ಪೋಸ್ಟ್ ಬಗ್ಗೆ ಹೇಳಿದ್ದೇನು?



















