ಟೆಹ್ರಾನ್ : ಫೆ.28ರಂದು ಪಶ್ಚಿಮ ಏಷ್ಯಾ ಯುದ್ಧ ಆರಂಭವಾದಾಗಿನಿಂದ ಮುಚ್ಚಿದ್ದ ಅಂತಾರಾಷ್ಟ್ರೀಯ ತೈಲ ಸಾಗಣೆಯ ಜೀವನಾಡಿ ಹೊರ್ಮುಜ್ ಜಲಸಂಧಿಯನ್ನು ಇದೀಗ ವಾಣಿಜ್ಯ ಹಡಗುಗಳ ಸಂಚಾರಕ್ಕಾಗಿ ಸಂಪೂರ್ಣವಾಗಿ ಮುಕ್ತಗೊಳಿಸಿರುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಘೋಷಿಸಿದ್ದಾರೆ.
ಆದರೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನೌಕಾಪಡೆಯು ತನ್ನದೇ ಆದ ಹೊಸ ಷರತ್ತುಗಳನ್ನು ವಿಧಿಸುವ ಮೂಲಕ ಈ ಘೋಷಣೆಗೆ ಹೊಸ ತಿರುವು ನೀಡಿದೆ. ಲೆಬನಾನ್ ಕದನ ವಿರಾಮದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಸೇನೆಯ ‘ಹೊಸ ಆದೇಶ’ವೇನು?
ವಿದೇಶಾಂಗ ಸಚಿವರ ಹೇಳಿಕೆಯ ಹೊರತಾಗಿಯೂ, ಐಆರ್‌ಜಿಸಿ ನೌಕಾಪಡೆಯು ಜಲಸಂಧಿ ಪ್ರವೇಶಿಸುವ ಹಡಗುಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಿದೆ. ಎಕ್ಸ್ (ಟ್ವಿಟರ್)ನಲ್ಲಿ ಮಾಹಿತಿ ಹಂಚಿಕೊಂಡಿರುವ ನೌಕಾಪಡೆ, ಜಲಸಂಧಿ ದಾಟುವ ಯಾವುದೇ ಹಡಗು ಐಆರ್‌ಜಿಸಿ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಸ್ಪಷ್ಟಪಡಿಸಿದೆ. ನಾಗರಿಕ ಹಡಗುಗಳು ಇರಾನ್ ನಿಗದಿಪಡಿಸಿದ ಮಾರ್ಗದಲ್ಲಿ ಮಾತ್ರ ಸಂಚರಿಸಬೇಕು ಮತ್ತು ಮಿಲಿಟರಿ ಹಡಗುಗಳ ಪ್ರವೇಶಕ್ಕೆ ಈಗಲೂ ಸಂಪೂರ್ಣ ನಿಷೇಧವಿದೆ. ಕದನ ವಿರಾಮ ಒಪ್ಪಂದದ ನಿಯಮಗಳಿಗೆ ಅನುಗುಣವಾಗಿ ಈ ಷರತ್ತುಗಳನ್ನು ‘ಹೊಸ ಆದೇಶ’ ಎಂದು ಸೇನೆ ಬಣ್ಣಿಸಿದೆ. ಸಚಿವ ಅರಘ್ಚಿ ಅವರು ತಮ್ಮ ಘೋಷಣೆಯಲ್ಲಿ ಈ ಯಾವುದೇ ನಿಬಂಧನೆಗಳ ಕುರಿತು ಮಾಹಿತಿ ನೀಡಿರಲಿಲ್ಲ ಎಂಬುದು ಗಮನಾರ್ಹ.
ಸಚಿವರ ಹೇಳಿಕೆಗೆ ಇರಾನ್ ಮಾಧ್ಯಮಗಳ ವಿರೋಧ
ಹೊರ್ಮುಜ್ ಜಲಸಂಧಿ ಮುಕ್ತಗೊಳಿಸುವ ಅರಘ್ಚಿ ಅವರ ಘೋಷಣೆಗೆ ಇರಾನ್‌ನ ಸರ್ಕಾರಿ ಬೆಂಬಲಿತ ಮಾಧ್ಯಮಗಳಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ‘ತಸ್ನೀಮ್’ ಸುದ್ದಿ ಸಂಸ್ಥೆಯು ಸಚಿವರ ಪೋಸ್ಟ್ ಅನ್ನು ‘ದೋಷಪೂರಿತ ಮತ್ತು ಅಪೂರ್ಣ’ ಎಂದು ಟೀಕಿಸಿದ್ದು, ಇದು ಜಲಸಂಧಿ ಮರುತೆರೆಯುವಿಕೆಯ ಬಗ್ಗೆ ಅನಗತ್ಯ ಗೊಂದಲಗಳನ್ನು ಸೃಷ್ಟಿಸಿದೆ ಎಂದು ಎಚ್ಚರಿಸಿದೆ. ಮತ್ತೊಂದು ಅರೆ-ಸರ್ಕಾರಿ ಮಾಧ್ಯಮ ಸಂಸ್ಥೆ ‘ಮೆಹರ್’, ಹೊರ್ಮುಜ್ ಜಲಸಂಧಿಯು ಇತ್ತೀಚಿನ ಯುದ್ಧದಲ್ಲಿ ನಿರ್ಣಾಯಕ ಅಂಶವಾಗಿತ್ತು ಮತ್ತು ಸರ್ವೋಚ್ಚ ನಾಯಕರ ಹೇಳಿಕೆಗಳ ಪ್ರಕಾರ, ಅದನ್ನು ಮುಚ್ಚಿಯೇ ಇಡಬೇಕು ಎಂದು ವರದಿ ಮಾಡಿದೆ.
ಅಮೆರಿಕದ ದಿಗ್ಬಂಧನ ಮುಂದುವರಿಕೆ
ಈ ಬೆಳವಣಿಗೆಗಳ ನಡುವೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರ್ಮುಜ್ ಜಲಸಂಧಿ ಸಂಪೂರ್ಣ ಮುಕ್ತವಾಗಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಇರಾನ್‌ನ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ಅರ್ಪಿಸಿರುವ ಅವರು, ಮತ್ತೊಂದು ಪೋಸ್ಟ್‌ನಲ್ಲಿ ಅಮೆರಿಕದ ಕಠಿಣ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಜಲಸಂಧಿ ಮುಕ್ತವಾಗಿದ್ದರೂ, ಇರಾನ್ ಜೊತೆಗಿನ ‘ವಹಿವಾಟು’ ಪೂರ್ಣಗೊಳ್ಳುವವರೆಗೆ ಅಮೆರಿಕದ ನೌಕಾಪಡೆಯ ದಿಗ್ಬಂಧನವು ಪೂರ್ಣ ಪ್ರಮಾಣದಲ್ಲಿ ಮುಂದುವರಿಯಲಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಇದೇ ವೇಳೆ, ಭವಿಷ್ಯದಲ್ಲಿ ಹೊರ್ಮುಜ್ ಜಲಸಂಧಿಯನ್ನು ಎಂದಿಗೂ ಮುಚ್ಚದಿರಲು ಮತ್ತು ಅದನ್ನು ಪ್ರಪಂಚದ ವಿರುದ್ಧ ಅಸ್ತ್ರವಾಗಿ ಬಳಸದಿರಲು ಇರಾನ್ ಒಪ್ಪಿಕೊಂಡಿದೆ ಎಂದಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತ
ಹೊರ್ಮುಜ್ ಜಲಸಂಧಿಯು ಜಾಗತಿಕ ತೈಲ ಸಾಗಣೆಯ ಅತ್ಯಂತ ಪ್ರಮುಖ ಮಾರ್ಗವಾಗಿರುವುದರಿಂದ, ಅದನ್ನು ಮರುತೆರೆಯುವ ಘೋಷಣೆಯು ಜಾಗತಿಕ ಮಾರುಕಟ್ಟೆಯ ಮೇಲೆ ತ್ವರಿತ ಪರಿಣಾಮ ಬೀರಿದೆ. ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿಯ ಪ್ರಕಾರ, ಜಲಸಂಧಿ ಮುಕ್ತಗೊಳಿಸುವ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ಕಚ್ಚಾ ತೈಲದ ಬೆಲೆಯಲ್ಲಿ ಶೇಕಡಾ 10ರಷ್ಟು ಕುಸಿತ ಕಂಡುಬಂದಿದೆ.
ಇದನ್ನೂ ಓದಿ : ಅಕ್ಷಯ ತೃತೀಯ 2026 – ಚಿನ್ನ ಖರೀದಿಗೆ ಮುಗಿಬಿದ್ದ ಸಿಲಿಕಾನ್ ಸಿಟಿ ಮಂದಿ!



















