ಬೆಂಗಳೂರು/ಯಾದಗಿರಿ : ಯಾದಗಿರಿ ಸಮೀಪದಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 7 ಜನ ಸಜೀವ ದಹನಗೊಂಡಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಶಾಂತಪುರ ಕ್ರಾಸ್ ಬಳಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಹೊತ್ತಿ ಉರಿದಿದೆ. ಭೀಕರ ಅಪಘಾತದಲ್ಲಿ 7 ಜನ ಬೆಂಕಿಯಲ್ಲಿ ಸುಟ್ಟುಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ಕುರಿತು ಸಿಕ್ಕಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪಘಾತಕ್ಕೊಳಗಾದ ಖಾಸಗಿ ಬಸ್ VRL ಸಂಸ್ಥೆಗೆ ಸೇರಿದ್ದು, ಬೆಂಗಳೂರಿನಿಂದ ಕಲಬುರಗಿಯತ್ತ ಪ್ರಯಾಣ ಬೆಳೆಸಿತ್ತು, ಇನ್ನು ಕಾರು ಯಾದಗಿರಿಯಿಂದ ರಾಯಚೂರಿನ ಲಿಂಗಸಗೂರಿನತ್ತ ಹೊರಟ್ಟಿತ್ತು.
ಈ ವೇಳೆ ಯಾದಗಿರಿಯ ಶಾಂತಪುರ ಕ್ರಾಸ್ ಬಳಿ ಘಟನೆ ನಡೆದಿದ್ದು, ಕಾರು ಹಾಗೂ ಬಸ್ ಡಿಕ್ಕಿಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಇದರ ತೀವ್ರತೆ ಹೆಚ್ಚಾಗಿದ್ದರಿಂದ ಇಬ್ಬರು ಮಕ್ಕಳು ಸೇರಿ 7 ಜನರು ಸುಟ್ಟುಕರಕಲಾಗಿದ್ದಾರೆ. ಇನ್ನು, ಖಾಸಗಿ ಬಸ್ ಸುಮಾರು 40ಮಂದಿ ಪ್ರಯಾಣಿಕರಿದ್ದು, ಅಪಘಾತದಲ್ಲಿ ಬಸ್ ನಲ್ಲಿದ್ದ ಹಲವರಿಗೆ ಗಂಭೀರ ಗಾಯಳಾಗಿವೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ಕಾರು-ಲಾರಿ ನಡುವೆ ಭೀಕರ ಅಪಘಾತ : ಓರ್ವ ದುರ್ಮರಣ


















