ಬೆಂಗಳೂರು : ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, 114 ಜಿಲ್ಲಾ ನ್ಯಾಯಾಧೀಶರನ್ನು ಏಕಕಾಲಕ್ಕೆ ವರ್ಗಾವಣೆಗೊಳಿಸಿ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮಹತ್ವದ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರನ್ನು ಕೂಡ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಜಡ್ಜ್ ಸಂತೋಷ್ ಗಜಾನನ ಭಟ್ ಅವರನ್ನು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕರನ್ನಾಗಿ ನೇಮಕ ಮಾಡಿ ವರ್ಗಾಯಿಸಲಾಗಿದೆ. ವರ್ಗಾವಣೆಗೊಂಡಿರುವ ಎಲ್ಲಾ ನ್ಯಾಯಾಧೀಶರು ಜೂನ್ 1ರಿಂದಲೇ ಅನ್ವಯವಾಗುವಂತೆ ತಮ್ಮ ಹೊಸ ಕಾರ್ಯ ಕ್ಷೇತ್ರಗಳಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸಲಾಗಿದೆ.
ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಇತ್ತೀಚಿಗೆ ಶಾಸಕ ವಿನಯ್ ಕುಲಕರ್ಣಿ ಭಾಗಿಯಾಗಿದ್ದಾರೆ ಎನ್ನಲಾದ ಕೊಲೆ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ್ದರು. ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. ಇವರ ವರ್ಗಾವಣೆ ಆದೇಶವು ಜೂನ್ 1 ರಿಂದ ಜಾರಿಗೆ ಬರಲಿರುವುದರಿಂದ, ನಾಳೆ (ಶುಕ್ರವಾರ ಏ.17) ನಿಗದಿಯಾಗಿರುವ ವಿನಯ್ ಕುಲಕರ್ಣಿ ಪ್ರಕರಣದ ಶಿಕ್ಷೆಯ ಪ್ರಮಾಣ ಪ್ರಕಟಿಸಲು ಯಾವುದೇ ತಾಂತ್ರಿಕ ಅಡಚಣೆ ಇರುವುದಿಲ್ಲ.
ಇನ್ನು, ನ್ಯಾ. ಸಂತೋಷ್ ಗಜಾನನ ಭಟ್ ಅವರ ವರ್ಗಾವಣೆಯಿಂದ ತೆರವಾದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಕ್ಕೆ ನಾ. ಕೆ.ಬಿ. ಶಿವಪ್ರಸಾದ್ ಅವರನ್ನು ನೇಮಿಸಲಾಗಿದೆ. ಶಿವಪ್ರಸಾದ್ ಅವರು ಪ್ರಸ್ತುತ ಮಂಡ್ಯದ 1ನೇ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದು, ಜೂನ್‌ನಿಂದ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ರಾಜ್ಯದ ಪ್ರಮುಖ ರಾಜಕೀಯ ಬೆಳವಣಿಗೆಗಳ ದೃಷ್ಟಿಯಿಂದ ಈ ಹುದ್ದೆಯ ನೇಮಕಾತಿ ಅತ್ಯಂತ ಪ್ರಮುಖವಾಗಿದೆ.
ಇದನ್ನೂ ಓದಿ : ರಾಮನ್ ಸಂಶೋಧನಾ ಸಂಸ್ಥೆಯಲ್ಲಿ 3 ಹುದ್ದೆಗಳ ನೇಮಕಾತಿ : ಬೆಂಗಳೂರಿನಲ್ಲೇ ಉದ್ಯೋಗ


















