ಬೆಂಗಳೂರು: ಇರಾನ್-ಅಮೆರಿಕ ಸಂಘರ್ಷದ ಪರಿಣಾಮವನ್ನು ಭಾರತ ಈಗಾಗಲೇ ಎದುರಿಸುತ್ತಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 62 ರೂಪಾಯಿ ಏರಿಕೆಯಾಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಲಕ್ಷಾಂತರ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ, ದೇಶದ ಜನರಿಗೆ ಇನ್ನೊಂದು ಶಾಕಿಂಗ್ ನ್ಯೂಸ್ ಕಾದಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಅಡುಗೆ ಎಣ್ಣೆ (ಖಾದ್ಯ ತೈಲ) ಆಮದು ಕುಸಿದಿದ್ದು, ಶೀಘ್ರದಲ್ಲೇ ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ.
ಸಾಲ್ವೆಂಟ್ ಎಕ್ಸ್ ಟ್ರ್ಯಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (SEA) ವರದಿಗಳ ಪ್ರಕಾರ, ಕಳೆದ ಮಾರ್ಚ್ ತಿಂಗಳಲ್ಲಿ ಭಾರತ ಆಮದು ಮಾಡಿಕೊಳ್ಳುವ ಖಾದ್ಯ ತೈಲದ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ. 2026ರ ಫೆಬ್ರವರಿಯಲ್ಲಿ ಭಾರತವು 12.92 ಲಕ್ಷ ಟನ್ ಖಾದ್ಯ ತೈಲ ಆಮದು ಮಾಡಿಕೊಂಡಿತ್ತು. ಆದರೆ, ಮಾರ್ಚ್ ತಿಂಗಳಲ್ಲಿ ಸಂಘರ್ಷದ ಹಿನ್ನೆಲೆಯಲ್ಲಿ ಖಾದ್ಯ ತೈಲದ ಆಮದು ಪ್ರಮಾಣ 11.73 ಲಕ್ಷ ಟನ್ ಗೆ ಇಳಿಕೆಯಾಗಿದೆ.
ಅಲ್ಲಿಗೆ, ಭಾರತದಲ್ಲಿ 1 ಲಕ್ಷಕ್ಕೂ ಅಧಿಕ ಟನ್ ಖಾದ್ಯ ತೈಲವು ಆಮದಾಗಿಲ್ಲ. ಇದರಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗುವ ಜತೆಗೆ ಬೆಲೆಯೂ ಏರಿಕೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ತಾಳೆ ಎಣ್ಣೆ, ಸೋಯಾಬಿನ್ ಎಣ್ಣೆಯ ಆಮದು ಪ್ರಮಾಣವು ಶೇ.4ರಷ್ಟು ಕುಸಿದಿದೆ. ಈ ಎಣ್ಣೆಗಳ ಬೆಲೆಯೂ ಏರಿಕೆಯಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಇದು ಗ್ರಾಹಕರ ಜೇಬಿಗೆ ಹೊರೆಯಾಗುವುದರಲ್ಲಿ ಎರಡು ಮಾತಿಲ್ಲ.
ಈಗಾಗಲೇ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಸಗಟು ದರದಲ್ಲಿ ಏರಿಕೆ ಕಂಡುಬಂದಿದೆ. ಇದು ಶೀಘ್ರದಲ್ಲೇ ಚಿಲ್ಲರೆ ಮಾರುಕಟ್ಟೆಯಲ್ಲೂ ಪ್ರತಿ ಲೀಟರ್ಗೆ 10 ರಿಂದ 20 ರೂಪಾಯಿ ಹೆಚ್ಚಾಗುವ ಸಾಧ್ಯತೆಯಿದೆ. ಆಮದು ಎಣ್ಣೆಗಳ ಬೆಲೆ ಏರಿದಾಗ, ಅದಕ್ಕೆ ಪೂರಕವಾಗಿ ಕಡಲೆಕಾಯಿ ಮತ್ತು ಸಾಸಿವೆ ಎಣ್ಣೆಯ ಬೆಲೆಗಳೂ ಸಾಮಾನ್ಯವಾಗಿ ಏರುತ್ತವೆ.



















