ಹೈದರಾಬಾದ್: ಬಲಿಷ್ಠ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಅಜೇಯವಾಗಿ ಸಾಗುತ್ತಿದ್ದ ರಾಜಸ್ಥಾನ್ ತಂಡಕ್ಕೆ ಹಿನ್ನಡೆ ಉಂಟಾಗಿದೆ.
ಉಪ್ಪಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ತಂಡ 216 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಯುವ ವೇಗಿಗಳ ದಾಳಿಗೆ ತತ್ತರಿಸಿ 156 ರನ್‌ಗಳಿಗೆ ಆಲೌಟ್ ಆಯಿತು.
ಇಶಾನ್ ಕಿಶನ್ ಸಿಡಿಲು ಇನ್ನಿಂಗ್ಸ್
ಆರಂಭದಲ್ಲಿ ಸನ್‌ರೈಸರ್ಸ್ ಉತ್ತಮ ಆರಂಭ ಪಡೆಯಲಿಲ್ಲ. ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಮೊದಲ ಎಸೆತದಲ್ಲೇ ಔಟ್ ಆಗಿದರು. ಟ್ರಾವಿಸ್ ಹೆಡ್ ಕೂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಆದರೆ ನಾಯಕ ಇಶಾನ್ ಕಿಶನ್ ಹೊಣೆ ಹೊತ್ತು ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, 44 ಎಸೆತಗಳಲ್ಲಿ 91 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಹೆನ್ರಿಕ್ ಕ್ಲಾಸೆನ್ (40 ರನ್) ಜೊತೆ ಮೂರನೇ ವಿಕೆಟ್‌ಗೆ 88 ರನ್‌ಗಳ ಮಹತ್ವದ ಜೊತೆಯಾಟ ನಡೆಸಿದರು. ಅಂತಿಮವಾಗಿ ನಿತೀಶ್ ರೆಡ್ಡಿ ಮತ್ತು ಸಲೀಲ್ ಅರೋರಾ ವೇಗದ ರನ್‌ಗಳೊಂದಿಗೆ ತಂಡವನ್ನು 217 ರನ್ ಗಡಿಗೆ ತಲುಪಿಸಿದರು.
ಯುವ ವೇಗಿಗಳ ಮಾರಕ ದಾಳಿ
ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿಯಿಂದ ಉತ್ತಮ ಆರಂಭ ನಿರೀಕ್ಷಿಸಲಾಗಿತ್ತು. ಆದರೆ ಸನ್‌ರೈಸರ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಪ್ರಫುಲ್ ಹಿಂಗೆ ಅದನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದರು. ತಮ್ಮ ಮೊದಲ ಓವರ್‌ನಲ್ಲೇ ಮೂರು ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ತಂದರು.
ಅವರಿಗೆ ಸಾಥ್ ನೀಡಿದ ಮತ್ತೊಬ್ಬ ಯುವ ವೇಗಿ ಸಕೀಬ್ ಹುಸೇನ್ ಕೂಡ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಮೊದಲ ಮೂರು ಓವರ್‌ಗಳಲ್ಲಿ ರಾಜಸ್ಥಾನ್ ಕೇವಲ 9 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.
ಪ್ರತಿರೋಧ ವಿಫಲ
ನಂತರ ಡೊನೊವನ್ ಫೆರೇರಾ ಮತ್ತು ರವೀಂದ್ರ ಜಡೇಜಾ 122 ರನ್‌ಗಳ ಜೊತೆಯಾಟದ ಮೂಲಕ ತಂಡವನ್ನು ಹಾದಿಗೆ ತರುವ ಪ್ರಯತ್ನ ಮಾಡಿದರು. ಆದರೆ ಸಕೀಬ್ ಮತ್ತೆ ದಾಳಿ ನಡೆಸಿ ಫೆರೇರಾ ವಿಕೆಟ್ ಪಡೆದು ಆ ಜೊತೆಯಾಟವನ್ನು ಮುರಿದರು.
ಇದರ ನಂತರ ರಾಜಸ್ಥಾನ್ ಇನ್ನಿಂಗ್ಸ್ ಕುಸಿದು 156 ರನ್‌ಗಳಿಗೆ ಆಲೌಟ್ ಆಯಿತು.
ಬೌಲಿಂಗ್ ಹೀರೋಗಳು
ಸನ್‌ರೈಸರ್ಸ್ ಪರ ಪ್ರಫುಲ್ ಹಿಂಗೆ 4 ವಿಕೆಟ್ ಪಡೆದರೆ, ಸಕೀಬ್ ಹುಸೇನ್ ಕೂಡ 4 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಜಯದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಟೂರ್ನಿಯಲ್ಲಿ ತಮ್ಮ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇದನ್ನೂ ಓದಿ : ಐಪಿಎಲ್ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದ BMRCL!



















