ಹೈದರಾಬಾದ್ : ಹಾಲಿವುಡ್‌ನ ಜನಪ್ರಿಯ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ನಾಯಕ ತನ್ನ ಕಾರಿನ ನಂಬರ್ ಪ್ಲೇಟ್ ಅನ್ನು ಕ್ಷಣಾರ್ಧದಲ್ಲಿ ಬದಲಾಯಿಸಿ ಶತ್ರುಗಳ ಕಣ್ತಪ್ಪಿಸುವ ದೃಶ್ಯಗಳನ್ನು ನೀವು ನೋಡಿರಬಹುದು. ಅದೇ ಮಾದರಿಯ ಘಟನೆಯೊಂದು ಹೈದರಾಬಾದ್‌ನಲ್ಲಿ ನಡೆದಿದ್ದು, ಕುಡಿದ ಮತ್ತಿನಲ್ಲಿ ಐಷಾರಾಮಿ ಬಿಎಂಡಬ್ಲ್ಯು (BMW) ಕಾರು ಚಲಾಯಿಸುತ್ತಿದ್ದ ವೈದ್ಯನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ರಿಮೋಟ್ ಕಂಟ್ರೋಲ್ ಬಳಸಿ ನಂಬರ್ ಪ್ಲೇಟ್ ಬದಲಾಯಿಸಿದ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್‌ನ ಪ್ರತಿಷ್ಠಿತ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಶನಿವಾರ ರಾತ್ರಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ಹೈಡ್ರಾಮಾ ನಡೆದಿದ್ದು, ಆರೋಪಿಯ ತಂತ್ರಜ್ಞಾನದ ದುರ್ಬಳಕೆಯ ಚಾಣಾಕ್ಷತೆ ಕಂಡು ಖುದ್ದು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ರಿಮೋಟ್ ಒತ್ತಿದರೆ ಬದಲಾಗುತ್ತಿತ್ತು ನಂಬರ್ ಪ್ಲೇಟ್!
ಆರೋಪಿಯನ್ನು ಡಾ. ಗೌತಮ್ ರೆಡ್ಡಿ ಎಂದು ಗುರುತಿಸಲಾಗಿದೆ. ಪೊಲೀಸರು ವಾಹನ ತಪಾಸಣೆ ವೇಳೆ ಈತನನ್ನು ತಡೆದು ಬ್ರೀತ್-ಅನಲೈಸರ್ (ಉಸಿರಾಟದ ಪರೀಕ್ಷೆ) ಪರೀಕ್ಷೆಗೆ ಒಳಪಡಿಸಲು ಮುಂದಾದಾಗ, ಆತ ತಕ್ಷಣವೇ ರಿಮೋಟ್ ಬಳಸಿ ಕಾರಿನ ನಂಬರ್ ಪ್ಲೇಟ್ ಅನ್ನು ಬದಲಾಯಿಸಿದ್ದಾನೆ. ಒಂದು ಬದಿಯಲ್ಲಿ ತೆಲಂಗಾಣ ನೋಂದಣಿಯ ‘TS9FQ9999’ ನಂಬರ್ ಪ್ಲೇಟ್ ಇದ್ದರೆ, ಅದು ತಿರುಗಿದ ಮರುಕ್ಷಣವೇ ದೆಹಲಿ ನೋಂದಣಿಯ ‘DL6CM7097’ ನಂಬರ್ ಪ್ಲೇಟ್ ಕಾಣಿಸಿಕೊಳ್ಳುತ್ತಿತ್ತು. ಸಿವಿಲ್ ಕ್ಯಾಮೆರಾಗಳು ಮತ್ತು ಇ-ಚಲನ್‌ಗಳಿಂದ ತಪ್ಪಿಸಿಕೊಳ್ಳಲು ಆರೋಪಿ ತನ್ನ ಕಾರಿನಲ್ಲಿ ಬಟನ್ ಮೂಲಕ ನಿಯಂತ್ರಿಸಬಹುದಾದಂತಹ ಫ್ಲಿಪ್ ನಂಬರ್ ಪ್ಲೇಟ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದ. ಈ ವ್ಯವಸ್ಥೆಯು ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಆಸ್ಟನ್ ಮಾರ್ಟಿನ್ ಕಾರಿನ ತಂತ್ರಜ್ಞಾನವನ್ನು ಹೋಲುವಂತಿತ್ತು.
ಪೂರ್ವಯೋಜಿತ ಕೃತ್ಯ: ಮೆಕ್ಯಾನಿಕ್‌ಗಳಿಗಾಗಿ ಹುಡುಕಾಟ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕಾರಿನಲ್ಲಿ ಕಂಡುಬಂದ ತೆಲಂಗಾಣದ ನಂಬರ್ ಪ್ಲೇಟ್ ವಾಸ್ತವವಾಗಿ ಆರೋಪಿಯ ಮತ್ತೊಂದು ವಾಹನಕ್ಕೆ ಸೇರಿದ್ದಾಗಿದೆ. ಅಂದರೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೂ ಪೊಲೀಸರ ಕಣ್ತಪ್ಪಿಸಲು ಉದ್ದೇಶಪೂರ್ವಕವಾಗಿಯೇ ಈ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯ ಸಂಚಾರ ನಿರೀಕ್ಷಕ ಎನ್. ರವೀಂದರ್ ಈ ಕುರಿತು ಪ್ರತಿಕ್ರಿಯಿಸಿದ್ದು, “ನಕಲಿ ನಂಬರ್ ಪ್ಲೇಟ್ ಬಳಸುವುದು ಹೊಸತೇನಲ್ಲ, ಆದರೆ ಇಷ್ಟೊಂದು ಅತ್ಯಾಧುನಿಕ ಸೆಟಪ್ ಹೊಂದಿರುವುದು ಅಪರೂಪ. ಡಿಜಿಟಲ್ ಕಣ್ಗಾವಲು ವ್ಯವಸ್ಥೆಯನ್ನು ದಿಕ್ಕುತಪ್ಪಿಸಲು ಮಾಡಿರುವ ಪೂರ್ವಯೋಜಿತ ಕೃತ್ಯ ಇದಾಗಿದೆ,” ಎಂದು ತಿಳಿಸಿದ್ದಾರೆ. ಖಾಸಗಿ ಕಾರ್ ಡೆಕೋರ್(ಕಾರು ಮರುವಿನ್ಯಾಸ) ಮಳಿಗೆಯೊಂದರಲ್ಲಿ ಈ ಮಾರ್ಪಾಡು ಮಾಡಿರುವ ಶಂಕೆ ಇದ್ದು, ಇಂತಹ ಅಕ್ರಮ ವ್ಯವಸ್ಥೆಗಳನ್ನು ರೂಪಿಸುವವರ ಪತ್ತೆಗಾಗಿ ವಿಚಾರಣೆ ಮುಂದುವರಿದಿದೆ.
ಬಿಎಂಡಬ್ಲ್ಯು ಜಪ್ತಿ
ವೈದ್ಯಕೀಯ ವೃತ್ತಿಯಲ್ಲಿದ್ದರೂ ಜವಾಬ್ದಾರಿ ಮರೆತಿದ್ದ ಡಾ. ಗೌತಮ್ ರೆಡ್ಡಿ, ಮಿತಿ ಮೀರಿ ಮದ್ಯಪಾನ ಮಾಡಿದ್ದರು. ರಕ್ತದಲ್ಲಿನ ಆಲ್ಕೋಹಾಲ್ ಮಟ್ಟವು ಪ್ರತಿ 100 ಮಿ.ಲೀ.ಗೆ 137 ಎಂಜಿ ಇರುವುದು ಪತ್ತೆಯಾಗಿದೆ (ಕಾನೂನುಬದ್ಧ ಮಿತಿ ಕೇವಲ 30 ಎಂಜಿ). ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ವಂಚನೆ ಹಾಗೂ ಕುಡಿದು ವಾಹನ ಚಲಾಯಿಸಿದ ಆರೋಪದಡಿ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐಷಾರಾಮಿ ಬಿಎಂಡಬ್ಲ್ಯು ಕಾರನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ : ಹೊರ್ಮುಜ್ ಜಲಸಂಧಿ ದಿಗ್ಬಂಧನ : ಅಮೆರಿಕ-ಇರಾನ್ ಬಿಕ್ಕಟ್ಟಿನ ನಡುವೆ ಭಾರತದ 15 ನೌಕೆಗಳು ಅತಂತ್ರ!



















