ವಿಜಯಪುರ : ಪ್ರೇಮ ಪ್ರಕರಣ ಬಹಿರಂಗವಾದ ಹಿನ್ನೆಲೆಯಲ್ಲಿ ನಿಶ್ಚಿತಾರ್ಥವಾಗಿದ್ದ ಮದುವೆ ರದ್ದಾಗಿದ್ದು, ಅವಮಾನಗೊಂಡ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ನಡೆದಿದೆ.
ಬಂದಾಳ ಗ್ರಾಮದ ಜಯಶ್ರೀ ಬಿರಾದಾರ್ (22) ಎಂಬ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮದಿನಾ ಮಸೀದಿ ಪಕ್ಕದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮಾಹಿತಿಯ ಪ್ರಕಾರ, ಇದೇ ಏಪ್ರಿಲ್ 27ರಂದು ಜಯಶ್ರೀಗೆ ಮದುವೆ ನಿಶ್ಚಯವಾಗಿತ್ತು. ಆದರೆ ಪ್ರಿಯಕರನಾಗಿದ್ದ ಶ್ರೀಶೈಲ್ ಬಡಾನೂರು, ಜಯಶ್ರೀ ತನ್ನನ್ನು ಪ್ರೀತಿಸುತ್ತಿದ್ದಾಳೆಂದು ಆತನೊಂದಿಗೆ ತೆಗೆದ ಫೋಟೋಗಳನ್ನು ವರನ ಮನೆಯವರಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ. ಈ ಫೋಟೋಗಳನ್ನು ಕಂಡ ವರ ಹಾಗೂ ಆತನ ಕುಟುಂಬ ಮದುವೆಯನ್ನು ರದ್ದು ಮಾಡಿಕೊಂಡಿದ್ದಾರೆ.
ಈ ಘಟನೆದಿಂದ ಮನನೊಂದ ಜಯಶ್ರೀ, ಮಾನ-ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಜಯಶ್ರೀ ತಾಯಿ ಸಾವಿತ್ರಿ, ತನ್ನ ಮಗಳ ಸಾವಿಗೆ ಕಾರಣನಾದ ಶ್ರೀಶೈಲ್‌ರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಬೀಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ, ಮಗು ಸಾವು?


















