ಬೆಂಗಳೂರು: ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ, ‘ಸ್ವರ ಸಾಮ್ರಾಜ್ಞಿ’ ಆಶಾ ಭೋಂಸ್ಲೆ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆಶಾ ಅವರ ಸಾವಿನಿಂದ ಹಳೆಯ ಮತ್ತು ಹೊಸ ತಲೆಮಾರಿನ ಸಂಗೀತದ ನಡುವಿನ ಕೊಂಡಿ ಕಳಚಿದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಆಶಾ ಭೋಂಸ್ಲೆ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಭಾವಪೂರ್ಣ ಪೋಸ್ಟ್ ಮಾಡಿರುವ ಮುಖ್ಯಮಂತ್ರಿಗಳು, ಅವರ ಗಾಯನ ಮತ್ತು ವ್ಯಕ್ತಿತ್ವವನ್ನು ಸ್ಮರಿಸಿದ್ದಾರೆ
ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಕಳೆದ ಹಲವು ದಶಕಗಳಿಂದ ಸುಮಾರು 12,000ಕ್ಕೂ ಅಧಿಕ ಹಾಡುಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದ ಸ್ವರ ಸಾಮ್ರಾಜ್ಞಿಯನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ.
ತಮ್ಮ ಸುಮಧುರ ಧ್ವನಿ, ಸರಳ ನಡೆ ನುಡಿ, ವಾತ್ಸಲ್ಯ ತುಂಬಿದ ಮಾತುಗಳಿಂದ ಅವರ ಜನಮಾನಸದಲ್ಲಿ ಶಾಶ್ವತ. ಆಶಾ ಭೋಸ್ಲೆಯವರ ನಿಧನದಿಂದ ಹಳೆಯ ಮತ್ತು ಹೊಸ ತಲೆಮಾರಿನ ಸಂಗೀತದ ಬಹುದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಬಂಧು ಮಿತ್ರರು ಹಾಗೂ ಅಭಿಮಾನಿ ಬಳಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಸಿಗಲಿ ಎಂದು ಮುಖ್ಯಮಂತ್ರಿಗಳು ಪ್ರಾರ್ಥಿಸಿದ್ದಾರೆ.
ಭಾರತೀಯ ಚಿತ್ರರಂಗದ ದಂತಕಥೆಯಾಗಿದ್ದ ಆಶಾ ಭೋಂಸ್ಲೆ ಅವರು ಕನ್ನಡದ ಹಲವು ಚಿತ್ರಗಳಲ್ಲಿಯೂ ಹಾಡುವ ಮೂಲಕ ಕನ್ನಡಿಗರಿಗೂ ಹತ್ತಿರವಾಗಿದ್ದರು ಎಂಬುದು ಗಮನಾರ್ಹ. ಅವರ ನಿಧನಕ್ಕೆ ಇಡೀ ಕರ್ನಾಟಕ ಶೋಕ ವ್ಯಕ್ತಪಡಿಸುತ್ತಿದೆ.
ಇದನ್ನೂ ಓದಿ: ಸಾವಿರಾರು ಭಾವಗಳಿಗೆ ಜೀವ ತುಂಬಿದ್ದ ಅದ್ಭುತ ಚೇತನ ಆಶಾ ಭೋಂಸ್ಲೆ!



















