ಟೆಹ್ರಾನ್: ಹಾರ್ಮುಜ್ ಜಲಸಂಧಿ ಮತ್ತು ಪರ್ಷಿಯನ್ ಕೊಲ್ಲಿಯ ಮೇಲ್ಭಾಗದಲ್ಲಿ ಕಣ್ಗಾವಲು ನಡೆಸುತ್ತಿದ್ದ ಅಮೆರಿಕ ನೌಕಾಪಡೆಗೆ ಸೇರಿದ ಅತ್ಯಂತ ದುಬಾರಿ ‘ಎಂಕ್ಯೂ-4ಸಿ ಟ್ರೈಟಾನ್’ (MQ-4C Triton) ಡ್ರೋನ್ ನಿಗೂಢವಾಗಿ ಕಣ್ಮರೆಯಾಗಿದೆ. ಹಾರಾಟದ ಮಧ್ಯೆ ತುರ್ತು ಸಂದೇಶ ರವಾನಿಸಿದ ಕೆಲವೇ ಕ್ಷಣಗಳಲ್ಲಿ ಈ ಡ್ರೋನ್ ಸಂಪರ್ಕ ಕಳೆದುಕೊಂಡಿದ್ದು, ಇದು ತಾಂತ್ರಿಕ ದೋಷದಿಂದ ಪತನಗೊಂಡಿದೆಯೇ ಅಥವಾ ಹೊಡೆದುರುಳಿಸಲಾಗಿದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಇರಾನ್-ಅಮೆರಿಕ ನಡುವೆ ಕದನ ವಿರಾಮ ಘೋಷಣೆಯಾಗಿ, ಇನ್ನೇನು ಪಾಕಿಸ್ತಾನದಲ್ಲಿ ಸಂಧಾನ ಮಾತುಕತೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಈ ಘಟನೆ ನಡೆದಿರುವುದು ಅಚ್ಚರಿಗೆ ಕಾರವಾಗಿದೆ.
ತುರ್ತು ಸಂದೇಶ ರವಾನಿಸಿ ದಿಢೀರ್ ನಾಪತ್ತೆ
ವರದಿಗಳ ಪ್ರಕಾರ, ಪರ್ಷಿಯನ್ ಕೊಲ್ಲಿ ಹಾಗೂ ಹಾರ್ಮುಜ್ ಜಲಸಂಧಿಯ ಪ್ರದೇಶದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕಣ್ಗಾವಲು ಕಾರ್ಯಾಚರಣೆ ಮುಗಿಸಿದ್ದ ಡ್ರೋನ್, ಇಟಲಿಯಲ್ಲಿರುವ ತನ್ನ ಮೂಲ ನೆಲೆಯಾದ ‘ನೇವಲ್ ಏರ್ ಸ್ಟೇಷನ್ ಸಿಗೊನೆಲ್ಲಾ’ಗೆ ಮರಳುವ ಹಾದಿಯಲ್ಲಿತ್ತು. ಈ ವೇಳೆ ಇರಾನ್ ಕಡೆಗೆ ಕೊಂಚ ಮುಖ ಮಾಡಿದ ಡ್ರೋನ್, ಹಠಾತ್ತನೆ ‘ಕೋಡ್ 7700’ (ಸಾಮಾನ್ಯ ತುರ್ತು ಪರಿಸ್ಥಿತಿಯನ್ನು ಸೂಚಿಸುವ ಸಂಕೇತ) ಸಂದೇಶವನ್ನು ರವಾನಿಸಿದೆ. ಆ ಬಳಿಕ ವೇಗವಾಗಿ ಕೆಳಮುಖವಾಗಿ ಚಲಿಸಿದ ಮಾನವರಹಿತ ವಿಮಾನವು, ರೇಡಾರ್ ಸಂಪರ್ಕ ಕಳೆದುಕೊಂಡು ಸಂಪೂರ್ಣವಾಗಿ ನಾಪತ್ತೆಯಾಗಿದೆ.

ಕದನ ವಿರಾಮದ ಬೆನ್ನಲ್ಲೇ ಘಟನೆ
ವಾಣಿಜ್ಯ ಹಡಗುಗಳ ಸಂಚಾರಕ್ಕಾಗಿ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿತ್ತು. ಈ ಮಹತ್ವದ ಒಪ್ಪಂದ ನಡೆದು ಕೇವಲ ಎರಡು ದಿನಗಳಾಗುವಷ್ಟರಲ್ಲೇ ಅಮೆರಿಕದ ಅತ್ಯಾಧುನಿಕ ಡ್ರೋನ್ ಕಣ್ಮರೆಯಾಗಿರುವುದು ಸಹಜವಾಗಿಯೇ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನೆಗೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲವಾದರೂ, ಈ ಬೆಳವಣಿಗೆಯು ಗಲ್ಫ್ ಪ್ರದೇಶದಲ್ಲಿ ಮತ್ತೆ ಆತಂಕದ ವಾತಾವರಣ ಸೃಷ್ಟಿಸಿದೆ.
200 ಮಿಲಿಯನ್ ಡಾಲರ್ ಮೌಲ್ಯದ ಡ್ರೋನ್
‘ಎಂಕ್ಯೂ-4ಸಿ ಟ್ರೈಟಾನ್’ ಅಮೆರಿಕದ ಬಳಿಯಿರುವ ಅತ್ಯಂತ ದುಬಾರಿ ಕಣ್ಗಾವಲು ವಿಮಾನಗಳಲ್ಲಿ ಒಂದಾಗಿದ್ದು, ಇದರ ಅಂದಾಜು ಮೌಲ್ಯ 200 ಮಿಲಿಯನ್ ಡಾಲರ್ (ಸುಮಾರು 1,600 ಕೋಟಿ ರೂಪಾಯಿ) ಗಿಂತಲೂ ಅಧಿಕವಾಗಿದೆ. ಸಾಮಾನ್ಯ ವಿಮಾನಗಳಿಗಿಂತ ತೀರಾ ಭಿನ್ನವಾಗಿರುವ ಈ ಡ್ರೋನ್ ಅನ್ನು, ಸಮುದ್ರದ ಕಿರಿದಾದ ಜಲಮಾರ್ಗಗಳಲ್ಲಿ ದೀರ್ಘಕಾಲದವರೆಗೆ ನಿರಂತರ ಕಣ್ಗಾವಲು ಇರಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಇದು ಕಡಲ ಕಾವಲು ಪಡೆಯ ಪಿ-8ಎ ಪೊಸಿಡಾನ್ (P-8A Poseidon) ಗಸ್ತು ವಿಮಾನಗಳಿಗೆ ಅತಿ ಎತ್ತರದಿಂದ ನಿಗಾ ಇಡುವ ಮೂರನೇ ಕಣ್ಣಾಗಿ ಕಾರ್ಯನಿರ್ವಹಿಸುತ್ತದೆ. ಗಲ್ಫ್ ಪ್ರದೇಶದಲ್ಲಿ ಅಮೆರಿಕದ ಸೆಂಟ್ರಲ್ ಕಮಾಂಡ್ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣಿಡಲು ಇಂತಹ ಅತ್ಯಾಧುನಿಕ ಡ್ರೋನ್‌ಗಳನ್ನು ನಿಯೋಜಿಸಲಾಗಿದೆ. ಆದರೆ ಇದೀಗ ಇಷ್ಟೊಂದು ಮೊತ್ತದ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಡ್ರೋನ್ ಕಣ್ಮರೆಯಾಗಿರುವುದು ಅಮೆರಿಕ ನೌಕಾಪಡೆಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.
ಇದನ್ನೂ ಓದಿ: IPL ಅಖಾಡದಲ್ಲಿ ಆಕ್ರೋಶದ ಅಲೆ – ತಮಾಷೆಯ ವಿಡಿಯೋಗೆ ಶ್ರೇಯಸ್ ಸಹೋದರಿಗೆ ಬೆದರಿಕೆ!



















