ಮೈಸೂರು:ಕಳೆದ ವರ್ಷ ಮೈಸೂರು ದಸರಾ ವೇಳೆ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಪ್ರಕರಣದ ಆರೋಪಿ ಕಾರ್ತಿಕ್ (32) ತಪ್ಪಿತಸ್ಥ ಎಂದು ಮೈಸೂರು ಶೀಘ್ರಗತಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, ಗಲ್ಲು ಶಿಕ್ಷೆ ವಿಧಿಸಿದೆ. ಕಲಬುರಗಿಯಿಂದ ಮೈಸೂರಿಗೆ ಬಲೂನ್ ಮಾರಲು ಬಂದಿದ್ದ ಕುಟುಂಬದ ಬಾಲಕಿ ದಸರಾ ವಸ್ತುಪ್ರದರ್ಶನದ ಬಳಿ ಟೆಂಟ್ನಲ್ಲಿ ಮಲಗಿದ್ದಾಗ ಮೈಸೂರಿನ ಸಿದ್ದಲಿಂಗಪುರ ನಿವಾಸಿಯಾದ ಕಾರ್ತಿಕ್ ಎಳೆದೊಯ್ದು ಈ ಭೀಕರ ಕೃತ್ಯ ಎಸಗಿದ್ದನು.
ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗ ಸಬ್ ಇನ್ಸ್ಪೆಕ್ಟರ್ ಜೈಕೀರ್ತಿ ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದರು. ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣಕ್ಕೆ ಈಗ ನ್ಯಾಯ ಸಿಕ್ಕಿದೆ.



















