ಬೆಂಗಳೂರು : ಬೇಸಿಗೆ ಕಾಲದಲ್ಲಿ ಲಾಭದ ನಿರೀಕ್ಷೆಯಲ್ಲಿದ್ದ ಪ್ರವಾಸೋದ್ಯಮ ಹಾಗೂ ಟೂರ್ಸ್ & ಟ್ರಾವೆಲ್ಸ್ ಕ್ಷೇತ್ರಕ್ಕೆ ಯುದ್ಧವು ದೊಡ್ಡ ಹೊಡೆತ ನೀಡಿದೆ. ನಿಂತಲ್ಲೇ ನಿಂತು ಧೂಳು ಹಿಡಿದ ಬೆಂಜ್, ಬಿಎಂಡಬ್ಲ್ಯೂ, ಟೊಯೋಟಾ ಯೆಲ್ಲೋ ಬೋರ್ಡ್ ಕಾರುಗಳು ಕ್ಷೇತ್ರದ ಸಂಕಷ್ಟವನ್ನು ಬಿಂಬಿಸುತ್ತಿವೆ.

ಗಲ್ಫ್ ದೇಶಗಳಿಂದ ಭಾರತಕ್ಕೆ ಆಗಮಿಸುವ ವಿದೇಶಿಗರ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಈ ಹಿಂದೆ ಪ್ರತಿದಿನವೂ ಸುಮಾರು 1.5 ಲಕ್ಷ ವಿದೇಶಿಗರು ಭಾರತಕ್ಕೆ ಬರುತ್ತಿದ್ದರೆ, ಕರ್ನಾಟಕಕ್ಕೆ ಮಾತ್ರ 12ರಿಂದ 15 ಸಾವಿರ ಮಂದಿ ಭೇಟಿ ನೀಡುತ್ತಿದ್ದರು. ಆದರೆ, ಯುದ್ಧ ಪರಿಸ್ಥಿತಿಯಿಂದಾಗಿ ವಿಮಾನಗಳ ಸಂಚಾರ ಕಡಿಮೆಯಾಗಿದ್ದು, ವಿದೇಶಿಗರ ಆಗಮನವೇ ಕುಂಠಿತವಾಗಿದೆ.
ಇದರಿಂದ ಪ್ರವಾಸೋದ್ಯಮ ಹಾಗೂ ಟೂರ್ಸ್ & ಟ್ರಾವೆಲ್ಸ್ ಉದ್ಯಮವು ಸಾಕಷ್ಟು ನಷ್ಟ ಅನುಭವಿಸುತ್ತಿದೆ. ವಾಹನಗಳು ನಿರುದ್ಯೋಗವಾಗಿದ್ದು, ಆರ್ಥಿಕ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಟ್ರಾವೆಲ್ಸ್ ಆಪರೇಟರ್ಸ್ ಅಸೋಸಿಯೇಷನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ನೆರವು ಕೋರಿ ಮನವಿ ಮಾಡಿದೆ.
ಅಸೋಸಿಯೇಷನ್ ಮನವಿಗಳು:
- ಬ್ಯಾಂಕ್ ಸಾಲಗಳಿಗೆ ಕನಿಷ್ಠ ಮೂರು ತಿಂಗಳ ವಿನಾಯಿತಿ
- ವಾಹನ ಸಾಲ ಮರುಪಾವತಿ ಅವಧಿ ವಿಸ್ತರಣೆ
- ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿ ಸಡಿಲಿಕೆ
- ಇಎಸ್ಐ ಮತ್ತು ಪಿಎಫ್‌ಗೆ ತಾತ್ಕಾಲಿಕ ವಿನಾಯಿತಿ
- ಕಾರ್ಯಾಚರಣೆ ವೆಚ್ಚ ನಿರ್ವಹಣೆಗೆ ಬಡ್ಡಿರಹಿತ ಕಾರ್ಯನಿರತ ಬಂಡವಾಳ ಸಹಾಯ
ಈ ಬಗ್ಗೆ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಮಾಹಿತಿ ನೀಡಿದ್ದು, ತಕ್ಷಣದ ಸರ್ಕಾರಿ ಹಸ್ತಕ್ಷೇಪ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ದುಬಾರಿ ದುನಿಯಾದಲ್ಲೂ ಇಳಿಕೆ ಕಂಡ ತರಕಾರಿ ಬೆಲೆ!


















