ಬೆಂಗಳೂರು : ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ನಿರೀಕ್ಷಿಸುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು ಸಂಜೆ ಪ್ರಕಟವಾಗಲಿದೆ ಎಂದು
ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ತಿಳಿಸಿದೆ.
ಶಿಕ್ಷಣ ಇಲಾಖೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಂಜೆ ವೇಳೆಯಲ್ಲಿ ಫಲಿತಾಂಶ ಪ್ರಕಟಿಸಲು ಮಂಡಳಿ ಮುಂದಾಗಿದೆ ಎನ್ನಲಾಗಿದೆ. ಮೊದಲಿಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದ್ದು, ಬಳಿಕ ಸಂಜೆ 6.15 ಕ್ಕೆ ಸಚಿವರು ಸುದ್ದಿಗೋಷ್ಠಿ ನಡೆಸಿ ಅಧಿಕೃತ ಮಾಹಿತಿ ನೀಡಲಿದ್ದಾರೆ.
ಇದೇ ವೇಳೆ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕ ಫಲಿತಾಂಶ ರವಾನೆ ಮಾಡುವ ವ್ಯವಸ್ಥೆಯನ್ನೂ ಮಂಡಳಿ ಮಾಡಿದ್ದು, ಡಿಜಿಲಾಕರ್ ಮೂಲಕ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಈ ಬಾರಿ ಅತಿ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ದಾಖಲೆ ಪ್ರಮಾಣದ ಫಲಿತಾಂಶ ಬರುವ ನಿರೀಕ್ಷೆ ಶಿಕ್ಷಣ ವಲಯದಲ್ಲಿ ವ್ಯಕ್ತವಾಗಿದೆ. ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ರಾಜ್ಯದಾದ್ಯಂತ ವಿದ್ಯಾರ್ಥಿಗಳು, ಪೋಷಕರು ಕಾತರದಿಂದ ಕಾಯುತ್ತಿದ್ದು, ಫಲಿತಾಂಶ ಪ್ರಕಟಣೆ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸಿದೆ.


















