ಲಕ್ನೋ : ಇಡೀ ನಾಗರಿಕ ಸಮಾಜವೇ ನಾಚಿಕೆಯಿಂದ ತಲೆತಗ್ಗಿಸುವಂತಹ ಕ್ರೂರ ಹಾಗೂ ಅಮಾನವೀಯ ಘಟನೆಯೊಂದಕ್ಕೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಸಾಕ್ಷಿಯಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ನಿರ್ಮಾಣ ಹಂತದ ಕಟ್ಟಡವೊಂದಕ್ಕೆ ಆಶ್ರಯ ಅರಸಿ ಹೋದ 13 ವರ್ಷದ ಬಾಲಕಿಯ ಮೇಲೆ ಐವರು ಕಾರ್ಮಿಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಭೀಕರ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಸಂತ್ರಸ್ತ ಬಾಲಕಿಯು ಕೇರ್ ಹೋಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಕೆಲಸಕ್ಕೆ ತೆರಳುತ್ತಿದ್ದಾಗ ಹಠಾತ್ ಮಳೆ ಸುರಿಯಲಾರಂಭಿಸಿತ್ತು. ಮಳೆಯಿಂದ ಬಚಾವಾಗಲು ಆಕೆ ಸಮೀಪದಲ್ಲಿದ್ದ ನಿರ್ಮಾಣ ಹಂತದ ಕಟ್ಟಡವೊಂದರ ಒಳಗೆ ಹೋಗಿದ್ದಳು. ಇದೇ ಸಂದರ್ಭವನ್ನು ಬಳಸಿಕೊಂಡ ಅಲ್ಲಿನ ಕಾರ್ಮಿಕನೊಬ್ಬ ಆಕೆಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾನೆ. ಬಾಲಕಿ ಕಿರುಚಾಡದಂತೆ ಆಕೆಯ ಬಾಯಿ ಮುಚ್ಚಿ, ಕೈಕಾಲುಗಳನ್ನು ಕಟ್ಟಿ ಹಾಕಿ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಬಳಿಕ ಇತರ ಕಾರ್ಮಿಕರ ಸಹಕಾರದೊಂದಿಗೆ ಈ ಹೇಯ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಶಯ ಮೂಡಿಸಿದ ಬಾಲಕಿಯ ನಾಪತ್ತೆ
ಬಾಲಕಿಯು ಕೆಲಸ ಮಾಡುವ ಕೇರ್ ಹೋಮ್‌ನ ಮಾಲೀಕರು, ಆಕೆ ಸಮಯಕ್ಕೆ ಸರಿಯಾಗಿ ಬಾರದಿದ್ದಾಗ ಆತಂಕಗೊಂಡು ಹುಡುಕಾಟ ಆರಂಭಿಸಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಹುಡುಕುತ್ತಿದ್ದಾಗ ನಿರ್ಮಾಣ ಹಂತದ ಕಟ್ಟಡದ ಮೇಲೆ ಸಂಶಯ ಮೂಡಿದೆ. ತಕ್ಷಣವೇ ಕಟ್ಟಡವನ್ನು ತಪಾಸಣೆ ನಡೆಸಿದಾಗ ಮೂರನೇ ಮಹಡಿಯಲ್ಲಿ ಬಾಲಕಿಯು ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದಾಳೆ. ಘಟನೆಯನ್ನು ಕಂಡು ಆಕ್ರೋಶಗೊಂಡ ಸಾರ್ವಜನಿಕರು ಕಟ್ಟಡದ ಮೇಲ್ಭಾಗದ ನೀರಿನ ಟ್ಯಾಂಕ್ ಬಳಿ ಅಡಗಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಐವರು ಆರೋಪಿಗಳ ಬಂಧನ
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಲಕ್ನೋ ಪೊಲೀಸರು ಸಂತ್ರಸ್ತೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೀತಾಪುರ ಮೂಲದ ಐವರು ಕಾರ್ಮಿಕರನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ. ಬಾಲಕಿಯ ಸ್ಥಿತಿ ಸದ್ಯ ಗಂಭೀರವಾಗಿದ್ದು, ತೀವ್ರ ನಿಗಾದಲ್ಲಿ ಇರಿಸಲಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ‘ಗುಜರಾತಿಗಳು ಅನಕ್ಷರಸ್ಥರು’ ಎಂಬ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ!



















