ಬೆಳಗಾವಿ : ಪ್ರೀತಿ ಹಾಗೂ ಮದುವೆಯ ಹೆಸರಿನಲ್ಲಿ ಯುವತಿಯನ್ನು ವಂಚಿಸಿ ಲಕ್ಷ ಲಕ್ಷ ರೂಪಾಯಿ ಹಣ ಹಾಗೂ ಚಿನ್ನಾಭರಣ ದೋಚಿದ ಅಮಾನವೀಯ ಪ್ರಕರಣ ಬೆಳಗಾವಿಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಮಾಧವ ಕಾಲೋನಿ ನಿವಾಸಿ ಈಶ್ವರಸಿಂಗ್ ಪ್ರೇಮಸಿಂಗ್ ಬಡಗೂಜರ್ ಎಂಬಾತನೇ ಈ ವಂಚನೆಯ ಸೂತ್ರಧಾರ ಎಂದು ಆರೋಪಿಸಲಾಗಿದೆ. ಫೇಸ್‌ಬುಕ್ ಮೂಲಕ ಯುವತಿಯೊಂದಿಗೆ ಪರಿಚಯ ಮಾಡಿಕೊಂಡ ಈತ, ಬಳಿಕ ಅದನ್ನು ಪ್ರೀತಿಗೆ ತಿರುಗಿಸಿ ಮದುವೆಯಾಗುವುದಾಗಿ ನಂಬಿಸಿದ್ದಾನೆ. ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಯುವತಿಗೆ ತಿಳಿಯದಂತೆ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ, ಯುವತಿಯಿಂದ ಭಾರಿ ಪ್ರಮಾಣದ ಹಣ ವಸೂಲಿ ಮಾಡಿದ್ದಾನೆ. ಸಂತ್ರಸ್ತೆಯ ತಾಯಿಯ ಚಿನ್ನಾಭರಣ ಹಾಗೂ ತಂದೆಯ ಎಫ್‌ಡಿ ಹಣವನ್ನೂ ಕಸಿದುಕೊಂಡಿದ್ದಾನೆ ಎನ್ನಲಾಗಿದೆ. ಸುಮಾರು 150 ಗ್ರಾಂ ಚಿನ್ನಾಭರಣ ಮತ್ತು 19 ಲಕ್ಷ ರೂಪಾಯಿಗಳನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿಕೊಂಡಿರುವುದು ಆರೋಪವಾಗಿದೆ.
ಇದಲ್ಲದೆ, ಆರೋಪಿಯ ತಾಯಿ 3 ಕೋಟಿ ರೂಪಾಯಿ ಕೊಟ್ಟರೆ ಮಾತ್ರ ಮದುವೆ ಎಂದು ಬೇಡಿಕೆ ಇಟ್ಟಿರುವುದು ಯುವತಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈ ಪ್ರಕರಣದಲ್ಲಿ ಶಹಾಪುರ ಪೊಲೀಸರ ನಡೆ ಸಂಶಯಾಸ್ಪದವಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಬ್ಯಾಂಕ್‌ನಿಂದ ವಶಪಡಿಸಿಕೊಂಡಿದ್ದ ಚಿನ್ನವನ್ನು ಮತ್ತೆ ಆರೋಪಿಗೆ ನೀಡಲಾಗಿದೆ ಹಾಗೂ ಪೊಲೀಸರೇ ಆರೋಪಿಗಳ ಜೊತೆ ಶಾಮೀಲಾಗಿದ್ದಾರೆ ಎಂದು ದೂರಿದ್ದಾರೆ. ನ್ಯಾಯಕ್ಕಾಗಿ ಇಂದು ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ ಯುವತಿ, ಕಣ್ಣೀರು ಹಾಕುತ್ತಾ ತಮಗೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿಯ ಮತ್ತೊಂದು ಲವ್ ಜಿಹಾದ್ ಕೇಸ್‌ಗೆ ಟ್ವಿಸ್ಟ್ – ಆರೋಪಿ ಪರ ಯುವತಿಯ ಅಚ್ಚರಿ ಹೇಳಿಕೆ ರೀವಿಲ್



















