ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಭಾರಿ ಒತ್ತಡಕ್ಕೆ ಸಿಲುಕಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ 43 ರನ್‌ಗಳ ಹೀನಾಯ ಸೋಲು ಸೇರಿದಂತೆ ಟೂರ್ನಿಯ ಆರಂಭದಲ್ಲೇ ಸತತ ಮೂರು ಪಂದ್ಯಗಳನ್ನು ಸೋತಿರುವ ಸಿಎಸ್‌ಕೆ ಪಾಳೆಯದಲ್ಲಿ ಇದೀಗ ನಾಯಕತ್ವದ ಕುರಿತು ಗಂಭೀರ ಚರ್ಚೆಗಳು ಮತ್ತು ವಿಮರ್ಶೆಗಳು ಶುರುವಾಗಿವೆ.
ಎಂ.ಎಸ್. ಧೋನಿ ಅವರಂತಹ ದಂತಕಥೆಯ ಉತ್ತರಾಧಿಕಾರಿಯಾಗಿ ತಂಡವನ್ನು ಮುನ್ನಡೆಸುತ್ತಿರುವ ಋತುರಾಜ್, ಇದೀಗ ತಮ್ಮದೇ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡು ನಾಯಕತ್ವದ ಭಾರದಿಂದ ಬಳಲುತ್ತಿರುವಂತೆ ಕಾಣಿಸುತ್ತಿದ್ದಾರೆ.
ಧೋನಿಯ ಪ್ರಭಾವ, ಸಂಜು ಸ್ಯಾಮ್ಸನ್ ಎಂಬ ‘ಪ್ಲಾನ್ ಬಿ’
ಚೆನ್ನೈ ತಂಡವನ್ನು ಮುನ್ನಡೆಸುವುದು ಕೇವಲ ಮೈದಾನದ ತಂತ್ರಗಾರಿಕೆಯಲ್ಲ, ಅದೊಂದು ಬಹುದೊಡ್ಡ ಭಾವನಾತ್ಮಕ ಜವಾಬ್ದಾರಿಯಾಗಿದೆ. ಗಾಯಕ್ವಾಡ್ ಅವರಿಗೆ ಎಂ.ಎಸ್. ಧೋನಿಯೆಂಬ ‘ಥಲ’ನ ಬೃಹತ್ ಇಮೇಜ್ ಅನ್ನು ಸರಿದೂಗಿಸುವುದು ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರತಿಯೊಂದು ಬೌಲಿಂಗ್ ಬದಲಾವಣೆಯನ್ನೂ ಧೋನಿಯ ತಂತ್ರಗಾರಿಕೆಯೊಂದಿಗೆ ಹೋಲಿಸಿ ನೋಡಲಾಗುತ್ತಿದೆ ಮತ್ತು ವಿಕೆಟ್ ಬೀಳದಿದ್ದರೆ ವಿಮರ್ಶೆಗೆ ಗುರಿಯಾಗಬೇಕಾಗುತ್ತದೆ. ಇದರ ಜೊತೆಗೆ, ರಾಜಸ್ಥಾನ್ ರಾಯಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಅನುಭವಿ ನಾಯಕ ಹಾಗೂ ಟಿ20 ವಿಶ್ವಕಪ್ ವಿಜೇತ ಆಟಗಾರ ಸಂಜು ಸ್ಯಾಮ್ಸನ್ ಅವರು ಇದೀಗ ಸಿಎಸ್‌ಕೆ ತಂಡದಲ್ಲಿರುವುದು ಗಾಯಕ್ವಾಡ್ ಪಾಲಿಗೆ ಮತ್ತೊಂದು ತಲೆನೋವಾಗಿದೆ. ಸಂಜು ಸ್ಯಾಮ್ಸನ್ ತಂಡದಲ್ಲಿ ಸಿದ್ಧ ‘ಪ್ಲಾನ್ ಬಿ’ (Plan B) ಆಗಿರುವುದರಿಂದ ಋತುರಾಜ್ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಮೇಲಿನ ಒತ್ತಡ ಹಾಗೂ ನಿಗಾ ಮತ್ತಷ್ಟು ಹೆಚ್ಚಾಗಿದೆ.
ವಿಫಲವಾಯಿತೇ ರಣತಂತ್ರ?
ಒಂದು ದಶಕಕ್ಕೂ ಹೆಚ್ಚು ಕಾಲ ಅನುಭವಿ ಆಟಗಾರರನ್ನೇ ನೆಚ್ಚಿಕೊಂಡು ‘ಡ್ಯಾಡ್ಸ್ ಆರ್ಮಿ’ (Dad’s Army) ಎಂಬ ಖ್ಯಾತಿ ಪಡೆದಿದ್ದ ಸಿಎಸ್‌ಕೆ, 2025ರ ಕಳಪೆ ಪ್ರದರ್ಶನದ ಬಳಿಕ 2026ರ ಹರಾಜಿನಲ್ಲಿ ತನ್ನ ರಣತಂತ್ರವನ್ನು ಸಂಪೂರ್ಣವಾಗಿ ಬದಲಿಸಿತು. ಸುಮಾರು 30 ಕೋಟಿ ರೂ.ಗಳನ್ನು ಯುವ ಆಟಗಾರರ ಮೇಲೆ ಹೂಡಿಕೆ ಮಾಡಿತು. ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರಂತಹ ಯುವ ಪ್ರತಿಭೆಗಳಿಗೆ ಮಣೆಹಾಕಿತು. ಆದರೆ, ಈ ಹೊಸ ಪ್ರಯೋಗ ಆರಂಭದಲ್ಲಿಯೇ ಕೈಕೊಟ್ಟಂತೆ ಕಾಣುತ್ತಿದೆ. ಎಂ.ಎಸ್. ಧೋನಿ ಗಾಯಗೊಂಡಿರುವುದು, ಡೆವಾಲ್ಡ್ ಬ್ರೆವಿಸ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿರುವುದು ಹಾಗೂ ಯುವ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಇನ್ನು ಪರೀಕ್ಷೆಗೆ ಒಳಪಡದಿರುವುದು ತಂಡದ ಸಮತೋಲನವನ್ನು ಕದಡಿದೆ. ಬ್ಯಾಟಿಂಗ್‌ನಲ್ಲಿ ಋತುರಾಜ್ ಮತ್ತು ಸ್ಯಾಮ್ಸನ್ ಇಬ್ಬರೂ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ.
ತಂತ್ರಗಾರಿಕೆಯಲ್ಲಿ ಎಡವುತ್ತಿದ್ದಾರೆಯೇ ಗಾಯಕ್ವಾಡ್?
ಕೇವಲ ಬ್ಯಾಟಿಂಗ್ ವೈಫಲ್ಯವಷ್ಟೇ ಅಲ್ಲ, ನಾಯಕನಾಗಿ ಗಾಯಕ್ವಾಡ್ ಅವರ ತಂತ್ರಗಾರಿಕೆಯೂ ವಿಮರ್ಶೆಗೆ ಗುರಿಯಾಗಿದೆ. ವಿಶೇಷವಾಗಿ ಸ್ಪಿನ್ನರ್‌ಗಳನ್ನು ಬಳಸಿಕೊಳ್ಳುವಲ್ಲಿ ಅವರು ಎಡವುತ್ತಿದ್ದಾರೆ. ಐತಿಹಾಸಿಕವಾಗಿ ಸಿಎಸ್‌ಕೆಯ ಅತಿ ದೊಡ್ಡ ಬಲವೇ ಸ್ಪಿನ್ ಬೌಲಿಂಗ್. ಆದರೆ, ಜಡೇಜಾ ಅವರ ಸ್ಥಾನ ತುಂಬಬಲ್ಲರೆಂದು 14.2 ಕೋಟಿ ರೂ. ನೀಡಿ ಖರೀದಿಸಲಾದ ಯುವ ಸ್ಪಿನ್ನರ್ ಪ್ರಶಾಂತ್ ವೀರ್‌ಗೆ ಕಳೆದ ಎರಡು ಪಂದ್ಯಗಳಲ್ಲಿ ಬೌಲಿಂಗ್ ಮಾಡಲು ಅವಕಾಶವನ್ನೇ ನೀಡಿಲ್ಲ. ಭಾನುವಾರ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರಜತ್ ಪಾಟಿದಾರ್ ಸ್ಪಿನ್ ವಿರುದ್ಧ ಅಬ್ಬರಿಸಿ ಸೆಟ್ ಆಗಿದ್ದಾಗ, ನೂರ್ ಅಹ್ಮದ್ ಅವರನ್ನು ದಾಳಿಗಿಳಿಸಿದ್ದು ನಾಯಕನ ತಪ್ಪು ಲೆಕ್ಕಾಚಾರಕ್ಕೆ ಸಾಕ್ಷಿಯಾಯಿತು. ಪಂದ್ಯದ ನಂತರದ ಪತ್ರಿಕಾಗೋಷ್ಠಿಗಳಲ್ಲಿಯೂ ಋತುರಾಜ್ ಅವರಲ್ಲಿ ಧೋನಿಯಲ್ಲಿದ್ದಂತಹ ನಿಖರತೆಯ ಕೊರತೆ ಎದ್ದು ಕಾಣುತ್ತಿದೆ.
ಮ್ಯಾನೇಜ್‌ಮೆಂಟ್ ಮುಂದಿರುವ ಯಕ್ಷಪ್ರಶ್ನೆ: ನಾಯಕತ್ವ ಬದಲಾಗಲಿದೆಯೇ?
ಅತ್ಯುತ್ತಮ ಬ್ಯಾಟರ್ ಆಗಿರುವ ಋತುರಾಜ್ ಗಾಯಕ್ವಾಡ್ ನಾಯಕತ್ವದ ಒತ್ತಡದಿಂದಾಗಿ ರನ್ ಗಳಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಮುಂದೆ ಇದೀಗ ಸ್ಪಷ್ಟ ಹಾಗೂ ಕಠಿಣ ಆಯ್ಕೆಯೊಂದು ಎದುರಾಗಿದೆ: ಗಾಯಕ್ವಾಡ್ ಅವರಿಗೆ ನಾಯಕನಾಗಿ ಮುಂದುವರಿಯಲು ಹೆಚ್ಚಿನ ಸಮಯ ಹಾಗೂ ಬೆಂಬಲ ನೀಡಬೇಕೆ? ಅಥವಾ ಅವರ ಅಗ್ರ ಕ್ರಮಾಂಕದ ಬ್ಯಾಟಿಂಗ್ ಸಾಮರ್ಥ್ಯವನ್ನು ಉಳಿಸಿಕೊಳ್ಳಲು ನಾಯಕತ್ವದ ಜವಾಬ್ದಾರಿಯಿಂದ ಅವರನ್ನು ಮುಕ್ತಗೊಳಿಸಿ ಸಂಜು ಸ್ಯಾಮ್ಸನ್‌ಗೆ ವಹಿಸಬೇಕೆ?
ಇದನ್ನೂ ಓದಿ : ಹಿಟ್‌ಮ್ಯಾನ್‌ನ ಬಹುದೊಡ್ಡ ದಾಖಲೆ ಉಡೀಸ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸ ಇತಿಹಾಸ ಬರೆದ ಕಿಂಗ್ ಕೊಹ್ಲಿ



















