ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿರುವ ಹಿರಿಯ ನ್ಯಾಯಾಂಗ ಅಧಿಕಾರಿಗಳ ಒತ್ತೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಬೆನ್ನಲ್ಲೇ, ಈ ಘಟನೆಗೆ ಸಂಚು ರೂಪಿಸಿದ ಆರೋಪದ ಮೇಲೆ ಎಐಎಂಐಎಂ (AIMIM) ನಾಯಕ ಮೊಫಕ್ಕೇರುಲ್ ಇಸ್ಲಾಂ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಬಿಟ್ಟು ಪರಾರಿಯಾಗಲು ಯತ್ನಿಸುತ್ತಿದ್ದ ಇಸ್ಲಾಂ ಅವರನ್ನು ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ವಶಕ್ಕೆ ಪಡೆಯಲಾಗಿದೆ.
ಬುಧವಾರ ಮಾಲ್ಡಾದ ಕಾಲಿಯಾಚಕ್ ಬಿಡಿಒ ಕಚೇರಿ ಮುಂದೆ ಭಾರೀ ಪ್ರತಿಭಟನೆ ಭುಗಿಲೆದ್ದಿತ್ತು. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದ್ದ ಏಳು ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಸುಮಾರು ಒಂಬತ್ತು ಗಂಟೆಗಳ ಕಾಲ ಕಚೇರಿಯೊಳಗೆ ಕೂಡಿಹಾಕಿ ಒತ್ತೆಯಲ್ಲಿರಿಸಿಕೊಂಡಿದ್ದರು. ಇವರಲ್ಲಿ ಮೂವರು ಮಹಿಳಾ ಅಧಿಕಾರಿಗಳು ಮತ್ತು ಒಬ್ಬ ಅಧಿಕಾರಿಯ ಐದು ವರ್ಷದ ಮಗು ಕೂಡ ಸೇರಿತ್ತು. ಮಧ್ಯರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಧಿಕಾರಿಗಳನ್ನು ರಕ್ಷಿಸುವಾಗ ಕಿಡಿಗೇಡಿಗಳು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.
ಮತದಾರರ ಪಟ್ಟಿ ಪರಿಷ್ಕರಣೆಯೇ ಸಂಘರ್ಷದ ಮೂಲ
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಮುನ್ನ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯೇ ಈ ವಿವಾದಕ್ಕೆ ಕಾರಣ ಎನ್ನಲಾಗಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 63 ಲಕ್ಷ ಹೆಸರುಗಳನ್ನು ಕೈಬಿಡಲಾಗಿದ್ದು, ಇನ್ನೂ 60 ಲಕ್ಷ ಮತದಾರರ ಹೆಸರುಗಳನ್ನು ಪರಿಶೀಲನೆಗೆ ಇಡಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನ್ಯಾಯಾಂಗ ಅಧಿಕಾರಿಗಳು ಈ ಪಟ್ಟಿಯಲ್ಲಿರುವ ಹೆಸರುಗಳ ಅರ್ಹತೆಯನ್ನು ಪರಿಶೀಲಿಸುತ್ತಿದ್ದರು. ಈ ಪ್ರಕ್ರಿಯೆಯ ವಿರುದ್ಧ ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರನ್ನು ಎಐಎಂಐಎಂ ನಾಯಕ ಮೊಫಕ್ಕೇರುಲ್ ಇಸ್ಲಾಂ ಪ್ರಚೋದಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಸುಪ್ರೀಂ ಕೋರ್ಟ್ ಕೆಂಡಾಮಂಡಲ
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಕಠಿಣ ಪದಗಳಿಂದ ವಾಗ್ದಾಳಿ ನಡೆಸಿದೆ. “ಇದು ಸರ್ಕಾರದ ಕ್ರಿಮಿನಲ್ ವೈಫಲ್ಯ” ಎಂದು ಬಣ್ಣಿಸಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠವು, ಬಂಗಾಳದ ರಾಜಕೀಯ ಧ್ರುವೀಕರಣವು ನ್ಯಾಯಾಂಗ ವ್ಯವಸ್ಥೆಯನ್ನೇ ಅಲುಗಾಡಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿತ್ತು. ಪ್ರಕರಣದ ತನಿಖೆಯನ್ನು ಸಿಬಿಐ (CBI) ಅಥವಾ ಎನ್ಐಎ (NIA) ಸಂಸ್ಥೆಗೆ ವಹಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಅಲ್ಲದೆ, ಅಧಿಕಾರಿಗಳ ರಕ್ಷಣೆಗೆ ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ಆದೇಶಿಸಿರುವ ಕೋರ್ಟ್, ಏಪ್ರಿಲ್ 6 ರಂದು ಹಾಜರಾಗುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅವರಿಗೆ ಸಮನ್ಸ್ ನೀಡಿತ್ತು.
ಇದನ್ನೂ ಓದಿ: ಕೈದಿಯ ಕೂಲಿ ಹಣ ನೀಡಲು ಲಂಚಕ್ಕೆ ಬೇಡಿಕೆ – ‘ಲೋಕಾ’ ಬಲೆಗೆ ಬಿದ್ದ ಹಳಿಯಾಳದ ಜೈಲರ್



















