ಮುಲ್ಲನ್‌ಪುರ: ಐಪಿಎಲ್ 2026ರ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದಿದ್ದು, ಈ ವೇಳೆ ಒಬ್ಬ ಪ್ರತಿಭಾವಂತ ಯುವ ವೇಗಿಯನ್ನು ವಿಶ್ವಕ್ಕೆ ಪರಿಚಯಿಸಿದೆ. ಅವರೇ 23 ವರ್ಷದ ಅಶೋಕ್ ಶರ್ಮಾ. ರಾಜಸ್ಥಾನದ ಈ ಅನ್‌ಕ್ಯಾಪ್ಡ್ ವೇಗಿ ತಮ್ಮ ವೇಗ ಮತ್ತು ನಿಖರತೆಯಿಂದ ಈಗಾಗಲೇ ಕ್ರಿಕೆಟ್ ಪಂಡಿತರ ಗಮನ ಸೆಳೆದಿದ್ದಾರೆ.
ಅಬುಧಾಬಿಯಲ್ಲಿ ನಡೆದ ಐಪಿಎಲ್ 2026ರ ಹರಾಜಿನಲ್ಲಿ ಅಶೋಕ್ ಶರ್ಮಾ ಅವರ ಮೂಲ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ, ಅಂದರೆ 90 ಲಕ್ಷ ರೂಪಾಯಿಗೆ ಗುಜರಾತ್ ಟೈಟಾನ್ಸ್ ಖರೀದಿಸಿತ್ತು. ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರೂ ಅವರಿಗೆ ಒಂದೂ ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಶುಭಮನ್ ಗಿಲ್ ನೇತೃತ್ವದ ತಂಡ ಅಶೋಕ್ ಮೇಲೆ ಭರವಸೆ ಇಟ್ಟು ಪಾದಾರ್ಪಣೆಗೆ ಅವಕಾಶ ನೀಡಿದೆ.
ದೇಶಿ ಕ್ರಿಕೆಟ್‌ನಲ್ಲಿ ವಿಕೆಟ್ ಬೇಟೆ
ಅಶೋಕ್ ಶರ್ಮಾ ಅವರ ಆಯ್ಕೆಗೆ ಪ್ರಮುಖ ಕಾರಣ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅವರು ನೀಡಿದ ಅಮೋಘ ಪ್ರದರ್ಶನ. ಈ ಟೂರ್ನಿಯಲ್ಲಿ ರಾಜಸ್ಥಾನ ತಂಡದ ಪರವಾಗಿ ಮಿಂಚಿದ ಅವರು, ಕೇವಲ 9 ಪಂದ್ಯಗಳಲ್ಲಿ 20 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ತಮಿಳುನಾಡು, ಕರ್ನಾಟಕ ಮತ್ತು ಸೌರಾಷ್ಟ್ರದಂತಹ ಬಲಿಷ್ಠ ತಂಡಗಳ ವಿರುದ್ಧ ಸತತವಾಗಿ ವಿಕೆಟ್ ಪಡೆಯುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
150 ಕಿಮೀ ವೇಗದ ಬೌಲಿಂಗ್
ಅಶೋಕ್ ಶರ್ಮಾ ಕೇವಲ ವಿಕೆಟ್ ಪಡೆಯುವುದು ಮಾತ್ರವಲ್ಲದೆ, ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ತಾವು ಒಬ್ಬ ‘ಹಾರ್ಡ್ ಲೆಂತ್’ ಬೌಲರ್ ಎಂದು ಗುರುತಿಸಿಕೊಳ್ಳಲು ಇಷ್ಟಪಡುವ ಇವರು, ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಲ್ಲಿ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸಿದ್ದರು.
ಆಶಿಶ್ ನೆಹ್ರಾ ಮೆಚ್ಚುಗೆ
ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ ಅವರು ಅಶೋಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಅಶೋಕ್ ಶರ್ಮಾ ಒಬ್ಬ ಅದ್ಭುತ ಪ್ರತಿಭೆ. ಕಳೆದ ಕೆಲವು ವಾರಗಳಲ್ಲಿ ಅವರ ಬೌಲಿಂಗ್ ಶೈಲಿಯನ್ನು ಗಮನಿಸಿದಾಗ, ಅವರು ನಮ್ಮ ತಂಡದ ಪ್ರಮುಖ ಬೌಲಿಂಗ್ ವಿಭಾಗದ ಭಾಗವಾಗಬಲ್ಲರು ಎಂಬ ನಂಬಿಕೆ ನಮಗಿದೆ. ಇಂತಹ ಯುವ ಆಟಗಾರರ ಶಕ್ತಿಯನ್ನು ಬಳಸಿಕೊಂಡು ಸಮತೋಲಿತ ತಂಡವನ್ನು ಕಟ್ಟುವುದು ನಮ್ಮ ಗುರಿ,” ಎಂದು ನೆಹ್ರಾ ಹೇಳಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ಇಬ್ಬರು ವಿದೇಶಿ ಆಟಗಾರರನ್ನು ಹೊರಗಿಟ್ಟು ಅಶೋಕ್ ಅವರಿಗೆ ಅವಕಾಶ ನೀಡಿರುವುದು ಅವರ ಮೇಲಿರುವ ನಿರೀಕ್ಷೆಯನ್ನು ತೋರಿಸುತ್ತದೆ.
ಇದನ್ನೂ ಓದಿ : ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ಗೆ ರೋಚಕ ಜಯ



















