ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಗಂಡನಿಗೆ ಮಾದಕ ವಸ್ತು ಹಾಗೂ ಸಿಮ್ ಕಾರ್ಡ್‌ಗಳನ್ನು ಪೂರೈಸಲು ಯತ್ನಿಸುತ್ತಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
27 ವರ್ಷದ ರಿತಿಕಾ ರೈ ಬಂಧಿತ ಮಹಿಳೆ. ಮಾರ್ಚ್ 26ರಂದು ಈಕೆ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಪತಿ ಫರಾನ್ ಖಾನ್ ಎಂಬಾತನನ್ನು ಭೇಟಿಯಾಗಲು ಬಂದಿದ್ದಳು. ಜೈಲಿನ ಮುಖ್ಯ ದ್ವಾರದ ಬಳಿ ಈಕೆಯ ನಡವಳಿಕೆ ಕಂಡು ಸಂಶಯಗೊಂಡ ಮಹಿಳಾ ಭದ್ರತಾ ಸಿಬ್ಬಂದಿ ತಕ್ಷಣ ಆಕೆಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ.
ಯುವತಿಯನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಜೈಲಿನೊಳಗೆ ಸಾಗಿಸಲು ಅಡಗಿಸಿಟ್ಟಿದ್ದ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಆಕೆಯಿಂದ 30 ಗ್ರಾಂ ಗಾಂಜಾ, 3 ಏರ್ಟೆಲ್ ಸಿಮ್ ಕಾರ್ಡ್‌ಗಳು, ಬೀಡಿ ಕಟ್ಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ರಿತಿಕಾ ರೈ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಜೈಲಿನೊಳಗೆ ಈ ವಸ್ತುಗಳನ್ನು ಯಾರ ಸೂಚನೆಯ ಮೇರೆಗೆ ತರಲಾಗಿತ್ತು? ಇದರ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬ ನಿಟ್ಟಿನಲ್ಲಿ ತನಿಖೆ ಚುರುಕುಗೊಂಡಿದೆ.
ರಿತಿಕಾ ಈ ಹಿಂದೆಯೂ ಇದೇ ರೀತಿ ಕಳ್ಳಾಟವಾಡಿ ಅರೆಸ್ಟ್ ಆಗಿದ್ದಳು. ಜಾಮೀನಿನ ಮೇಲೆ ಹೊರ ಬಂದು ಮತ್ತದೇ ಚಾಳಿ ಮುಂದುವರಿಸಿದ್ದಾಳೆ. ಸದ್ಯ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಇದನ್ನೂ ಓದಿ : ಭಾರತದಿಂದ ಬರಬೇಕಿದ್ದ ನೆರವು ವಿಮಾನದ ಮೇಲೆ ಅಮೆರಿಕ ವೈಮಾನಿಕ ದಾಳಿ!



















