ಬೆಂಗಳೂರು: ಬಿಡಿಎ ಬಹುನಿರೀಕ್ಷಿತ ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಯೋಜನೆಯ ಮೊದಲ ಹಂತದ ಕಾಮಗಾರಿಗಾಗಿ ಟೆಂಡರ್ ಆಹ್ವಾನಿಸಲಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಯ ನಿಟ್ಟಿನಲ್ಲಿ ಈ ಯೋಜನೆ ಅತ್ಯಂತ ಮಹತ್ವದಾಗಲಿದೆ.
ಈ ಟೆಂಡರ್ ಯೋಜನೆಯ ಮೊದಲ ಪ್ಯಾಕೇಜ್‌ಗೆ ಸಂಬಂಧಿಸಿದ್ದಾಗಿದ್ದು, ತುಮಕೂರು ರಸ್ತೆಯ ಮಾದಾವರ(ಬಿಐಇಸಿ)ಯಿಂದ ಏರ್‌ಪೋರ್ಟ್ ಸಮೀಪ ಬಳ್ಳಾರಿ ರಸ್ತೆಯವರೆಗೆ ಒಟ್ಟು 19.8 ಕಿಲೋಮೀಟರ್ ಉದ್ದದ 8 ಪಥಗಳು ನಿರ್ಮಾಣವಾಗಲಿದೆ. ಈ ಬೃಹತ್ ಕಾಮಗಾರಿಯ ಅಂದಾಜು ವೆಚ್ಚ 3348.05 ಕೋಟಿ ರೂಪಾಯಿಗಳೆಂದು ಗುರುತಿಸಲಾಗಿದೆ.
ಈ ಯೋಜನೆಯನ್ನು ‘ವಿನ್ಯಾಸ, ನಿರ್ಮಾಣ, ನಿರ್ವಹಣೆ ಮತ್ತು ಹಸ್ತಾಂತರ’ ಮಾದರಿಯಲ್ಲಿ ಕೈಗೊಳ್ಳಲಾಗುತ್ತಿದೆ. ರಸ್ತೆ ನಿರ್ಮಾಣದ ಬಳಿಕ 10 ವರ್ಷಗಳ ಕಾಲ ಅದರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಗುತ್ತಿಗೆದಾರ ಸಂಸ್ಥೆಯೇ ನೋಡಿಕೊಳ್ಳಬೇಕಾಗುತ್ತದೆ. ಕಾಮಗಾರಿ ಪೂರ್ಣಗೊಳಿಸಲು 36 ತಿಂಗಳ (3 ವರ್ಷ) ಕಾಲಾವಕಾಶ ನೀಡಲಾಗಿದೆ.
ಇನ್ನು ಯೋಜನೆಯ ಜಮೀನುಗಳ ಭೂಸ್ವಾದೀನ ಸಂಬಂಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು ಬಾಕಿ ಇವೆ. ಹೀಗಾಗಿ, ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟು ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಬಿಡಿಎ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಆಸಕ್ತ ಬಿಡ್‌ದಾರರು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬಹುದು ಅಥವಾ ಬಿಡಿಎ ಸಹಾಯವಾಣಿ 9483166622 ಸಂಪರ್ಕಿಸಲು ತಿಳಿಸಲಾಗಿದೆ.
ಇದನ್ನೂ ಓದಿ : ಸರ್ಕಾರಿ ಕಟ್ಟಡಗಳೇ ಕೋಟ್ಯಾಂತರ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವೆ – ದಾಖಲೆಗಳೊಂದಿಗೆ N.R ರಮೇಶ್ ಆರೋಪ



















