ಟೆಹ್ರಾನ್ : ಇರಾನ್‌ನ ನೂತನ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಜಗತ್ತಿನಾದ್ಯಂತ ಸಂಶಯಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಅವರು ಅಜ್ಞಾತ ಸ್ಥಳದಿಂದಲೇ ಲಿಖಿತ ಮಾಹಿತಿಯೊಂದನ್ನು ರವಾನಿಸುವ ಮೂಲಕ ತಾನು ಬದುಕಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಇರಾನ್‌ಗೆ ಬೆಂಬಲ ನೀಡುತ್ತಿರುವ ಇರಾಕ್ ಜನತೆಗೆ ಅವರು ಈ ಸಂದೇಶದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಟ್ರಂಪ್ ಹೇಳಿಕೆಗೆ ಪರೋಕ್ಷ ಉತ್ತರ?
2 ದಿನಗಳ ಹಿಂದೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊಜ್ತಾಬಾ ಖಮೇನಿ ಅವರ ಬಗ್ಗೆ ವ್ಯಂಗ್ಯವಾಡಿದ್ದರು. “ನಾವು ಇರಾನ್‌ನ ಪ್ರಭಾವಿ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ, ಆದರೆ ಅದು ಮೊಜ್ತಾಬಾ ಖಮೇನಿ ಅವರಂತೂ ಅಲ್ಲ. ಅವರು ಬದುಕಿದ್ದಾರೋ ಇಲ್ಲವೋ ಎಂಬುದು ನಮಗೆ ತಿಳಿದಿಲ್ಲ. ಬಹುತೇಕ ಅವರು ಸತ್ತಿರಬಹುದು” ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಇದಕ್ಕೆ ಉತ್ತರ ಎಂಬಂತೆ ಇರಾನ್ ಮಾಧ್ಯಮಗಳು ಭಾನುವಾರ ಮೊಜ್ತಾಬಾ ಖಮೇನಿ ಅವರ ಲಿಖಿತ ಪತ್ರವನ್ನು ಪ್ರಕಟಿಸಿವೆ. ಫೆಬ್ರವರಿ 28ರಂದು ನಡೆದ ವೈಮಾನಿಕ ದಾಳಿಯಲ್ಲಿ ತಂದೆ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟ ನಂತರ, ಮೊಜ್ತಾಬಾ ಅವರನ್ನು ಹೊಸ ನಾಯಕನನ್ನಾಗಿ ಘೋಷಿಸಲಾಗಿತ್ತು. ಆದರೆ ಅಂದಿನಿಂದ ಅವರು ಒಮ್ಮೆಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
ಇರಾಕ್ ಬೆಂಬಲಕ್ಕೆ ಧನ್ಯವಾದ
ಇರಾನ್‌ನ ಇಸ್ನಾ (ISNA) ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಮೊಜ್ತಾಬಾ ಖಮೇನಿ ಅವರು ಇರಾಕ್‌ನ ಪ್ರಭಾವಿ ಧಾರ್ಮಿಕ ನಾಯಕ ಗ್ರ್ಯಾಂಡ್ ಆಯತೊಲ್ಲಾ ಅಲಿ ಸಿಸ್ತಾನಿ ಮತ್ತು ಇರಾಕ್ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. “ಇರಾನ್ ವಿರುದ್ಧದ ಆಕ್ರಮಣವನ್ನು ವಿರೋಧಿಸಿ ನಮ್ಮ ಬೆಂಬಲಕ್ಕೆ ನಿಂತಿರುವ ಇರಾಕ್‌ನ ನಿಲುವು ಶ್ಲಾಘನೀಯ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇರಾಕ್‌ನಲ್ಲಿರುವ ಇರಾನ್ ರಾಯಭಾರಿಯ ಮೂಲಕ ಈ ಸಂದೇಶವನ್ನು ರವಾನಿಸಲಾಗಿದೆ ಎಂದು ಹೇಳಲಾಗಿದ್ದರೂ, ಮುಜ್ತಬಾ ಅವರು ಪ್ರಸ್ತುತ ಎಲ್ಲಿದ್ದಾರೆ ಎಂಬ ಮಾಹಿತಿ ಮಾತ್ರ ಇನ್ನೂ ನಿಗೂಢವಾಗಿದೆ.
ಮುಜ್ತಬಾ ಬದುಕುಳಿದಿದ್ದಾರೆಯೇ?
ವೈಮಾನಿಕ ದಾಳಿಯಲ್ಲಿ ಮೊಜ್ತಾಬಾ ಖಮೇನಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇರಾನ್‌ನ ಕೆಲವು ಅಧಿಕೃತ ಮೂಲಗಳು ಸೂಚಿಸಿವೆ. ಆದರೆ, ಅವರು ಇಂದಿನವರೆಗೆ ಟಿವಿ ಅಥವಾ ವಿಡಿಯೋ ಮೂಲಕ ಸಾರ್ವಜನಿಕರ ಮುಂದೆ ಬಾರದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ನಡುವೆ ಇರಾನ್ ಸರ್ಕಾರವು ಅವರ ಹಳೆಯ ಚಿತ್ರಗಳನ್ನೇ ಹೊಸದಾಗಿ ಬಿಡುಗಡೆ ಮಾಡುತ್ತಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಶಂಕಿಸಿವೆ. 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್‌ನ ಮೂರನೇ ಪರಮೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಿರುವ ಮೊಜ್ತಾಬಾ ಖಮೇನಿ ಅವರ ಈ ಮೌನ ಮತ್ತು ಲಿಖಿತ ಸಂದೇಶಗಳ ಯುದ್ಧವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ : ಅಂತಾರಾಷ್ಟ್ರೀಯ ರೇಸಿಂಗ್ ಗ್ರಿಡ್‌ಗೆ ‘ಟೆನ್10’ ಭರ್ಜರಿ ಮರುಪ್ರವೇಶ!



















