ಬೆಂಗಳೂರು : ಸಿಎಂ ಸಿದ್ದರಾಮಯ್ಯ ಆತಂಕದ ಪರಿಸ್ಥಿತಿಯಲ್ಲಿದ್ದು, ರಾಜ್ಯದ ಜನರ ವಿಶ್ವಾಸಗಳಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಒಂದೊಂದು ಕ್ಷೇತ್ರಗಳಲ್ಲಿ ಐದು ದಿನ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಡಾ.ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರದ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಒಬ್ಬ ಮುಖ್ಯಮಂತ್ರಿ ಒಂದೊಂದು ಕ್ಷೇತ್ರಗಳಲ್ಲಿ ಐದು ಐದು ದಿನ ಪ್ರಚಾರ ಮಾಡುತ್ತಿದ್ದಾರೆ. ಅವರು ಗೆದ್ದಿರುವ ಕ್ಷೇತ್ರಗಳಲ್ಲೇ ಈ ಮಟ್ಟಕ್ಕೆ ಪ್ರಚಾರ ಮಾಡ್ತಿದ್ದಾರೆ ಅಂದರೆ, ಅವರ ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಅಂತಾ ಆಲೋಚನೆ ಮಾಡಿ. ನಮಗಂತೂ ವಿಶ್ವಾಸವಿದೆ ನಾವು ಎರಡು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು, ಸಚಿವರು, ಶಾಸಕರು ಚುನಾವಣೆ ಕೆಲಸದಲ್ಲಿ ಬ್ಯುಸಿ ಇರುವ ವಿಚಾರವಾಗಿ ಮಾತನಾಡಿ, ಅವರು ಪ್ರಕೃತಿ ವಿಕೋಪ, ಬರ, ಅತಿವೃಷ್ಠಿ ಬಗ್ಗೆ ತಲೆಕೆಡೆಸಿಕೊಳ್ಳಲ್ಲ. ಎಷ್ಟೋ ಸಾರಿ ಅತಿವೃಷ್ಠಿ ಬಂದಾಗ ಸರ್ಕಾರ ನಿದ್ದೆಯಲ್ಲಿರುತ್ತದೆ. ಸಂಪೂರ್ಣ ವಿಶ್ರಾಂತಿಯಲ್ಲಿ, ಸುಖ ಸಂತೋಷದಲ್ಲೇ ಆಡಳಿತ ನಡೆಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ವೇಳೆ ಹಿಂದಿ ಕಡ್ಡಾಯ ಅಲ್ಲ ಅನ್ನೋ ಸರ್ಕಾರದ ನಿರ್ಧಾರಕ್ಕೆ ಖಂಡಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನವ್ರೇ ತ್ರಿಭಾಷಾ ನೀತಿ ಜಾರಿಗೆ ತಂದಿದ್ದು, ಈಗ ತ್ರಿಭಾಷಾ ಬೇಡ, ದ್ವಿಭಾಷಾ ಬೇಕು ಅಂತಿದ್ದಾರೆ. ಇಂಗ್ಲಿಷ್ ಬೇಕು, ಹಿಂದಿ ಯಾಕೆ ಬೇಡ? ಹಿಂದಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ದೇಶದ್ರೋಹದ ಕೆಲಸ ಮಾಡ್ತಿದೆ ಎಂದು ಆರೋಪಿಸಿದ್ದಾರೆ.
ತ್ರಿಭಾಷಾ ನೀತಿಯಲ್ಲಿ ಹಿಂದಿನೇ ಓದಬೇಕು ಅಂತೇನೂ ಇಲ್ಲ. ರಾಜ್ಯ ಸರ್ಕಾರ ಸಣ್ಣತನ ತೋರಿದೆ, ಇಂಥ ನಿರ್ಧಾರಗಳಿಂದಾಗಿ ಶಿಕ್ಷಣದಲ್ಲಿ ಗುಣಮಟ್ಟ ಕಡಿಮೆಯಾಗಿದೆ. 72 ಕೋಟಿ ಶಿಕ್ಷಣಕ್ಕೆ ಅನುದಾನ ಬಳಸ್ತಾರೆ, ಯಾವ ಗುಣಮಟ್ಟದ ಶಿಕ್ಷಣ ಕೊಡ್ತಿದ್ದಾರೆ? ಕಾಂಗ್ರೆಸ್‌ನವ್ರು ರಾಜ್ಯ ಅಧೋಗತಿಗೆ ತರ್ತಿದ್ದಾರೆ, ಹಿಂದಿ ತೆಗೆದು ದೇಶ ಹೇಗೆ ಕಟ್ತಾರೆ? ದೇಶದಲ್ಲಿ ಸಂಪರ್ಕ ಸಾಧಿಸಲು ಹಿಂದಿ ಬೇಕು, ಕಾಂಗ್ರೆಸ್ ಸಣ್ಣತನದ ರಾಜಕೀಯ ಮಾಡ್ತಿದೆ, ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತೆ ಎಂದು ಅಶ್ವಥ್ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಉದ್ಯಮಿ ಆತ್ಮಹತ್ಯೆಗೆ ಶರಣು!


















