ಉಡುಪಿ\ಕಾರ್ಕಳ | ತಿಂಗಳ ಹಿಂದಷ್ಟೇ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದ ಯುವ ಉದ್ಯಮಿಯೊಬ್ಬ ಇತ್ತೀಚೆಗೆ ತಿಂಡಿಯ ಜೊತೆಗೆ ವಿಷ ಸೇವಿಸಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ನೆಲ್ಯಾಡಿ ನಿವಾಸಿ ಸುದೀಪ್ ರೈ(36) ಮೃತ ಯುವ ಉದ್ಯಮಿ. ಇವರು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕರ್ನೋಡಿಯಲ್ಲಿ ಅಜ್ಜನ ಮನೆಯಲ್ಲಿ ವಾಸವಿದ್ದರು. ಸುದೀಪ್ ರೈಗೆ ಕಳೆದ ಫೆ.17ರಂದು ಕಾರ್ಕಳ ತಾಲೂಕಿನ ಯುವತಿ ಜೊತೆಗೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿತ್ತು.
ಸುದೀಪ್ ಅವರು ಬೆಳ್ತಂಗಡಿಯಲ್ಲಿ ಎಸ್‌ಆರ್‌ಎನ್ ಗ್ರೂಪ್ ಹೆಸರಲ್ಲಿ ಇಲೆಕ್ಟ್ರಾನಿಕ್ ಮತ್ತು ಸೋಲಾರ್ ಉದ್ಯಮ ನಡೆಸುತ್ತಿದ್ದರು. ಈ ನಡುವೆ, ಮಾರ್ಚ್ 17ರಂದು ಸುದೀಪ್ ತಿಂಡಿಯ ಜೊತೆಗೆ ವಿಷ ಸೇವಿಸಿದ್ದಾರೆ ಎನ್ನಲಾಗುತ್ತಿದ್ದು, ಆನಂತರ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಆದರೆ ನಿನ್ನೆ (ಮಾರ್ಚ್ 29) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರ ತನಿಖೆಯಿಂದ ಕಾರಣ ಬಯಲಾಗಬೇಕಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಉದ್ಯಮಿಯ ತಂದೆ ದಾಮೋದರ ರೈ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : PSL 2026 | ಶಾಹೀನ್, ಸಿಕಂದರ್ ರಾಜಾ ವಿರುದ್ಧ ಭದ್ರತಾ ಲೋಪದ ಗಂಭೀರ ಆರೋಪ!


















