ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಮತ್ತು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಐಷಾರಾಮಿ ಜೀವನಶೈಲಿಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ತಮ್ಮ ಗೆಳತಿ ಎನ್ನಲಾದ ಮಾಡೆಲ್ ಮಹಿಮಾ ಶರ್ಮಾ (Mahieka Sharma) ಅವರಿಗೆ ಸುಮಾರು 1.7 ಕೋಟಿ ರೂಪಾಯಿ ಬೆಲೆ ಬಾಳುವ ಅತ್ಯಂತ ಐಷಾರಾಮಿ ‘ಮರ್ಸಿಡಿಸ್ ಬೆಂಜ್ ವಿ-ಕ್ಲಾಸ್’ (Mercedes-Benz V-Class) ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಭಾರತದ ಮೊದಲ ಮರ್ಸಿಡಿಸ್ ವಿ-ಕ್ಲಾಸ್ ಮಾದರಿಯ ಕಾರು
ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ನೀಡಿದ ಈ ಉಡುಗೊರೆಯು ಭಾರತದ ಮೊದಲ ಮರ್ಸಿಡಿಸ್ ಬೆಂಜ್ ವಿ-ಕ್ಲಾಸ್ ಮಾದರಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ಕಾರು ತನ್ನ ಅಪ್ರತಿಮ ಸೌಕರ್ಯ ಮತ್ತು ಸುಧಾರಿತ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಐಪಿಎಲ್ 2026ರ ಅಭಿಯಾನದ ನಡುವೆಯೇ ಹಾರ್ದಿಕ್ ತಮ್ಮ ಪ್ರಿಯತಮೆಗೆ ಇಂತಹ ದುಬಾರಿ ಉಡುಗೊರೆ ನೀಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಅವರು ತಮ್ಮ ಮಗ ಆಗಸ್ತ್ಯನಿಗಾಗಿ 4 ಕೋಟಿ ರೂಪಾಯಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಖರೀದಿಸಿದ್ದರು ಎಂಬುದು ಇಲ್ಲಿ ಗಮನಾರ್ಹ.
ಟೀ 20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಸಂಭ್ರಮದ ಉಡುಗೊರೆ
ಇತ್ತೀಚೆಗೆ ನಡೆದ 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಐತಿಹಾಸಿಕ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದರು. ಈ ಗೆಲುವಿನ ಸಂಭ್ರಮದ ನಂತರ ಹಾರ್ದಿಕ್ ಮತ್ತು ಮಹಿಮಾ ಶರ್ಮಾ ಅವರ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ವಿಶ್ವಕಪ್ ಗೆಲುವಿನ ನಂತರ ಹಾರ್ದಿಕ್ ಅವರು ಮಹಿಮಾ ಶರ್ಮಾ ಅವರಿಗೆ 12 ಕೋಟಿ ರೂಪಾಯಿ ಬೆಲೆಯ ಫೆರಾರಿ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದರು ಎಂಬ ಸುದ್ದಿಯೂ ಹರಿದಾಡಿತ್ತು. ಈಗ ಈ ಮರ್ಸಿಡಿಸ್ ಕಾರಿನ ಸೇರ್ಪಡೆಯು ಹಾರ್ದಿಕ್ ಪಾಂಡ್ಯ ಅವರ ಐಷಾರಾಮಿ ಕಾರುಗಳ ಸಂಗ್ರಹಕ್ಕೆ ಹೊಸ ಮೆರುಗು ನೀಡಿದೆ.
ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲಿ ಸುನಿಲ್ ನರೈನ್ ಹೊಸ ದಾಖಲೆ : ಕಿರಾನ್ ಪೊಲಾರ್ಡ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೆಕೆಆರ್ ಸ್ಟಾರ್


















