ಬೆಂಗಳೂರು: ಕರ್ನಾಟಕದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯು (Mid Day Meal Scheme) ಶಾಲಾ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸುವ ಮತ್ತು ಶಾಲಾ ದಾಖಲಾತಿಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೊಳಿಸಿದ ಪ್ರಮುಖ ಯೋಜನೆಯಾಗಿದೆ. ಈಗ ಯೋಜನೆಯನ್ನು ‘ಪಿಎಂ ಪೋಷಣ್’ ಶಕ್ತಿ ನಿರ್ಮಾಣ್ ಎಂದು ಕರೆಯಲಾಗುತ್ತಿದೆ. ಹೀಗೆ, ಪಿಎಂ ಪೋಷಣ್ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟದ ಸಿಬ್ಬಂದಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ.
ಹೌದು, ಇದುವರೆಗೆ ಕೆಲಸ ಮಾಡಿದ ಬಿಸಿಯೂಟದ ಸಿಬ್ಬಂದಿಯು 2026-27ನೇ ಶೈಕ್ಷಣಿಕ ಸಾಲಿಗೂ ಮರು ನೇಮಕ ಮಾಡಲು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಬಿಸಿಯೂಟದ ಅಡುಗೆ ಸಿಬ್ಬಂದಿಯನ್ನು ಸಾಮಾನ್ಯವಾಗಿ ವಾರ್ಷಿಕವಾಗಿ 10 ತಿಂಗಳ ತಾತ್ಕಾಲಿಕ ಸೇವೆಯ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ಪ್ರತಿ ವರ್ಷ ಮಾರ್ಚ್ 31ರಂದು ಅಡುಗೆ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗುತ್ತದೆ. ಶಾಲೆಗಳು ಪುನಃ ಪ್ರಾರಂಭವಾದಾಗ ಹೊಸ ಶೈಕ್ಷಣಿಕ ಸಾಲಿಗೆ ಅವರನ್ನು ಮತ್ತೆ ಕರ್ತವ್ಯಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಇದರಂತೆ ಮತ್ತೆ ನೇಮಕ ಮಾಡಿಕೊಳ್ಳಲು ಆದೇಶಿಸಲಾಗಿದೆ.
ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಈಗಾಗಲೇ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು 2026ರ ಮಾರ್ಚ್ 31ರಂದು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು. ಹಾಗೆಯೇ, 2026ರ ಜೂನ್ 1ರಿಂದ ಅವರನ್ನು ಮರುನೇಮಕ ಮಾಡಿಕೊಳ್ಳಬೇಕು. ಮರು ನೇಮಕಾತಿಯಲ್ಲಿ ಯಾವುದೇ ರೀತಿಯ ವಿಳಂಬವಾಗಬಾರದು ಎಂದು ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ.
ಅಡುಗೆ ಸಿಬ್ಬಂದಿಗೆ 60 ವರ್ಷಗಳನ್ನು ನಿವೃತ್ತಿ ವಯಸ್ಸನ್ನಾಗಿ ನಿಗದಿಪಡಿಸಲಾಗಿದೆ. ಹಾಗಾಗಿ, 60 ವರ್ಷ ದಾಟಿದವರ ಬದಲಾಗಿ ಹೊಸ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಕೂಡ ಆದೇಶದಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲ, 60 ವರ್ಷ ಪೂರೈಸಿ ನಿವೃತ್ತರಾಗುವ ಸಿಬ್ಬಂದಿಗೆ ಸರ್ಕಾರವು ಇತ್ತೀಚೆಗೆ ಏಕಕಾಲದ ಧನಸಹಾಯವನ್ನು ಕೂಡ ಘೋಷಿಸಿದೆ. ಕರ್ನಾಟಕದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಬಿಸಿಯೂಟ ಸೌಲಭ್ಯ ನೀಡಲಾಗುತ್ತಿದೆ.
ಇದನ್ನೂ ಓದಿ: ಹಳ್ಳಿಗಳಲ್ಲಿ 45 ದಿನಕ್ಕೊಂದು LPG ಸಿಲಿಂಡರ್ ವಿತರಣೆ – ಕೆ.ಹೆಚ್.ಮುನಿಯಪ್ಪ



















